ಟೋಲ್ ಪ್ಲಾಜಾ
(ಸಂಗ್ರಹ ಚಿತ್ರ)
ಬೆಂಗಳೂರು: ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಆಕರಿಸಲಾಗುವ ಸುಂಕವು ಏಪ್ರಿಲ್ 1ರಿಂದ ಶೇ 5ರಷ್ಟು ಹೆಚ್ಚಳವಾಗಲಿದೆ.
ರಾಷ್ಟ್ರೀಯ ಹೆದ್ದಾರಿಗಳ ಮೇಲಿನ ಸುಂಕಗಳಿಗೆ ಕೇಂದ್ರ ಸರ್ಕಾರ ಶೀಘ್ರವೇ ಹೊಸ ನೀತಿ ಪ್ರಕಟಿಸಲಿದೆ. ಇದರಲ್ಲಿ ಗ್ರಾಹಕರಿಗೆ ಕೆಲವು ರಿಯಾಯಿತಿ ದೊರೆಯಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದರೂ ಅದಿನ್ನೂ ಜಾರಿಯಾಗಿಲ್ಲ. 2008ರ ನೀತಿಯೇ ಅನ್ವಯವಾಗಲಿದೆ.
323 ರಾಜ್ಯ ಹೆದ್ದಾರಿ ಟೋಲ್ ಪ್ಲಾಜಾ ಸೇರಿ ದೇಶದಲ್ಲಿ ಒಟ್ಟು 1,181 ಇವೆ. 2023-24ರಲ್ಲಿ ₹ 42,196 ಕೋಟಿ ಟೋಲ್ ಶುಲ್ಕ ಸಂಗ್ರಹವಾಗಿದ್ದು, 2024–25ರಲ್ಲಿ ₹ 64,809 ಕೋಟಿ ಸಂಗ್ರಹವಾಗಿದೆ. ಒಂದೇ ವರ್ಷದಲ್ಲಿ ಶೇ 35ರಲ್ಲಿರಷ್ಟು ಹೆಚ್ಚಳವಾಗಿದೆ. ಕರ್ನಾಟಕದಲ್ಲಿ 58 ಟೋಲ್ ಪ್ಲಾಜಾಗಳಿದ್ದು, ಕಳೆದ ಐದು ವರ್ಷಗಳಲ್ಲಿ ₹13,702 ಕೋಟಿ ಸಂಗ್ರಹವಾಗಿದೆ.
‘ಈಗಲೇ ಟೋಲ್ ದರ ಹೆಚ್ಚು ಇದೆ. ಬಸ್, ಟ್ರಕ್‌ಗಳು ಒಂದು ಸಾರಿ ಹೋಗಬೇಕಿದ್ದರೆ ₹ 355, ಹೋಗಿ–ವಾಪಸ್ ಬರಲು ₹ 535 ಟೋಲ್ ನೀಡಬೇಕಿದೆ. ಕಾರುಗಳು, ವ್ಯಾನ್‌ಗಳು ಹೋಗಿ ಬರಲು ₹ 170 ಪಾವತಿ ಮಾಡಬೇಕು. ಮತ್ತೆ ಟೋಲ್ ದರ ಹೆಚ್ಚಳವಾಗುತ್ತಿರುವುದು ಇನ್ನಷ್ಟು ಹೊರೆಯಾಗಲಿದೆ’ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಬೇಸರ ವ್ಯಕ್ತಪಡಿಸಿದರು.
‘ಶೇ 5 ಎಂದು ಹೇಳಿದರೂ ಕೆಲವು ಟೋಲ್‌ಗಳಲ್ಲಿ ಶೇ 12ರವರೆಗೂ ಹೆಚ್ಚಳ ಮಾಡುತ್ತಾರೆ. ಕೇಂದ್ರ ಸರ್ಕಾರವನ್ನು ಯಾರೂ ಪ್ರಶ್ನಿಸುವವರಿಲ್ಲದಂತಾಗಿದೆ. ಟೋಲ್ ಪ್ಲಾಜಾಗಳಲ್ಲಿ ಸುಂಕ ಪಡೆಯಬೇಕಿದ್ದರೆ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಿಯಮಗಳಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇಲ್ಲ, ಲಾರಿ ಪಾರ್ಕಿಂಗ್ ಇಲ್ಲ, ವಿಶ್ರಾಂತಿ ಕೊಠಡಿಗಳಿಲ್ಲ. ರಸ್ತೆ ಇದೆ ಎಂಬ ಒಂದೇ ಕಾರಣಕ್ಕೆ ಟೋಲ್ ಪ್ಲಾಜಾ ಮಾಡಿದ್ದಾರೆ. ಪ್ರತಿ ವರ್ಷ ಸುಂಕ ಏರಿಕೆ ಮಾಡುತ್ತಲೇ ಹೋಗುತ್ತಿದ್ದಾರೆ’ ಎಂದು ಲಾರಿ ಫೆಡರೇಷನ್ ಅಧ್ಯಕ್ಷ ನವೀನ್ ರೆಡ್ಡಿ ದೂರಿದರು.
ವಾಣಿಜ್ಯ ವಾಹನಗಳೂ ದುಬಾರಿ
ವಾಹನ ತಯಾರಿಕಾ ವಸ್ತುಗಳಿಗೆ ಕೇಂದ್ರ ಸರ್ಕಾರ ತೆರಿಗೆ ಹೆಚ್ಚಳ ಮಾಡಿರುವು ದರಿಂದ ಫೆಡರೇಷನ್ ಆಫ್ ಆಟೊಮೊಬೈಲ್ ಡೀಲರ್ಸ್ ಅಸೋಸಿಯೇಶನ್ (ಫಾಡ) ವಾಹನಗಳ ಬೆಲೆಯನ್ನು ಏ.1ರಿಂದ ಹೆಚ್ಚಳ ಮಾಡಲು ನಿರ್ಧರಿಸಿವೆ.
ಮಾರುತಿ ಸುಜುಕಿ ಕಂಪನಿಯು ಶೇ 4, ಕಿಯಾ ಇಂಡಿಯಾ ಶೇ 3, ಟಾಟಾ ಮೋಟರ್ಸ್ ಶೇ 2ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿವೆ. ಹುಂಡೈ ₹25 ಸಾವಿರ ವರೆಗೆ ಹೆಚ್ಚಳ ಮಾಡುವುದಾಗಿ ಹೇಳಿದೆ. ಹೋಂಡಾ, ಮಹೀಂದ್ರ, ಎಂ.ಜಿ ಮೋಟಾರ್ ಇಂಡಿಯಾ, ಸ್ಕೋಡಾ, ಮರ್ಸಿಡೀಸ್ ಬೆಂಜ್ ಮತ್ತು ಬಿಎಂಡಬ್ಲ್ಯು ಕಂಪನಿಗಳು ಕೂಡ ಕಾರುಗಳ ಬೆಲೆ ಏರಿಸುವುದಾಗಿ ಹೇಳಿವೆ.
ಫಿಟ್‌ನೆಸ್ ಸರ್ಟಿಫಿಕೇಟ್ ಶುಲ್ಕ ಹೆಚ್ಚಳ
ಹಳೆಯ ವಾಹನಗಳಿಗೆ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್‌ನೆಸ್ ಸರ್ಟಿಫಿಕೇಟ್) ಶುಲ್ಕವನ್ನು ಹೆಚ್ಚಿಸುವುದಾಗಿ ಕೇಂದ್ರ ಹೆದ್ದಾರಿ ಸಚಿವಾಲಯ ಕರಡು ಹೊರಡಿಸಿದೆ. ಇದರಿಂದ 8 ವರ್ಷ, 15 ವರ್ಷ ಮತ್ತು 20 ವರ್ಷಗಳಾಗಿರುವ ವಾಹನಗಳಿಗೆ ಎಫ್‌ಸಿ ದುಬಾರಿಯಾಗಲಿದೆ. ರಾಜ್ಯದಲ್ಲಿ ₹ 10 ಲಕ್ಷ ಮೀರಿದ ಮೌಲ್ಯದ ವಾಣಿಜ್ಯ ವಾಹನಗಳಿಗೆ ಮಾತ್ರ ಇದ್ದ ಜೀವಿತಾವಧಿ ತೆರಿಗೆಯನ್ನು ಎಲ್ಲ ವಾಣಿಜ್ಯ ವಾಹನಗಳಿಗೂ ಅನ್ವಯಿಸಿ ರಾಜ್ಯ ಸರ್ಕಾರ ಅನುಷ್ಠಾನ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.