ADVERTISEMENT

ಮಕ್ಕಳಲ್ಲಿ 'ಟೊಮೆಟೊ ಫ್ಲೂ' ರೋಗ: ಕೇರಳ ಗಡಿಯಲ್ಲಿ ಕಟ್ಟೆಚ್ಚರ

ಆತಂಕ ಬೇಡ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 12 ಮೇ 2022, 3:07 IST
Last Updated 12 ಮೇ 2022, 3:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ಮಕ್ಕಳಲ್ಲಿ ಕಂಡು ಬರುವ ಟೊಮೆಟೊ ಫ್ಲೂ ರೋಗದ ಹರಡುವಿಕೆ ತಡೆಗಟ್ಟಲು ಕೇರಳ ಗಡಿಜಿಲ್ಲೆಗಳಲ್ಲಿ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಈಗಾಗಲೇ ಇರುವ ಕಾಯಿಲೆಯಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

’ಕೇರಳದಲ್ಲಿ ಈ ರೋಗದ ಪ್ರಕರಣ ಗಳು ಪತ್ತೆಯಾಗಿರುವುದರಿಂದ ಮಂಗ‌ಳೂರು, ಉಡುಪಿ, ಕೊಡಗು, ಚಾಮ ರಾಜನಗರ ಹಾಗೂ ಮೈಸೂರು ಜಿಲ್ಲೆಗಳಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ಇರಿಸಲು ಸೂಚನೆ ನೀಡಲಾಗಿದೆ’ ಎಂದರು.

‘ರಾಜ್ಯದ ಯಾವುದೇ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ಈ ರೋಗ ಲಕ್ಷಣ ಕಂಡು ಬರುವ ಮಕ್ಕಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ನಿಗಾ ಇರಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯಿಂದ ಲಿಖಿತ ನಿರ್ದೇಶನ ನೀಡಲಾಗಿದೆ. ಅಪರೂಪದ ವೈರಸ್ ಆಗಿರುವ ಟೊಮೆಟೊ ಜ್ವರದ ಪ್ರಕರಣಗಳು ಕೇರಳ ರಾಜ್ಯದ ಅರ್ಯಂಕಾರು, ಅಂಚಲ್ ಹಾಗೂ ನೆಡುವತೂರ್‌ನಲ್ಲಿ ಕಂಡು ಬಂದಿವೆ. ಟೊಮೆಟೊ ಜ್ವರಕ್ಕೂ ಕೊರೊನಾಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಕೇರಳದಲ್ಲಿ ಈಗಾಗಲೇ ಇರುವ ಕಾಯಿಲೆಯಾಗಿದೆ’ ಎಂದು ತಿಳಿಸಿದ್ದಾರೆ.

ರೋಗ ಲಕ್ಷಣ
* ಸಾಮಾನ್ಯವಾಗಿ 5 ವರ್ಷ ವಯಸ್ಸಿನ ಒಳಗಿನ ಮಕ್ಕಳಲ್ಲಿ ಕಂಡು ಬರುತ್ತದೆ.
* ಚರ್ಮದ ತುರಿಕೆ, ಕೆಂಪಾಗುವುದು, ನೀರಡಿಕೆ ಮೊದಲಾದ ಲಕ್ಷಣಗಳನ್ನು ಹೊಂದಿವೆ.
*ತೀವ್ರ ಜ್ವರ, ಮೈ ಕೈ ನೋವು, ಕೀಲು ನೋವು, ಆಯಾಸ ಮೊದಲಾದ ಲಕ್ಷಣಗಳೂ ಕಂಡುಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.