ADVERTISEMENT

ತುಮಕೂರು ಗ್ರಾಮಾಂತರ ಜೆಡಿಎಸ್‌ ಶಾಸಕ ಡಿ.ಸಿ.ಗೌರಿಶಂಕರ್‌ಗೆ ಕೋವಿಡ್

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 10:29 IST
Last Updated 15 ಸೆಪ್ಟೆಂಬರ್ 2020, 10:29 IST
ಶಾಸಕ ಡಿ.ಸಿ ಗೌರಿಶಂಕರ್‌
ಶಾಸಕ ಡಿ.ಸಿ ಗೌರಿಶಂಕರ್‌   

ತುಮಕೂರು: ಜೆಡಿಎಸ್ ಮುಖಂಡ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ.

ವಿಧಾನಸಭೆ ಅಧಿವೇಶನ ಪ್ರಾರಂಭಕ್ಕೂ ಮುನ್ನ ಕೋವಿಡ್ ತಪಾಸಣೆಗೆ ಒಳಗಾಗಬೇಕು ಎಂಬ ನಿಯಮದ ಕಾರಣ ರೋಗಲಕ್ಷಣಗಳು ಇಲ್ಲದೇ ಇದ್ದರೂ ಶಾಸಕರು ಕೋವಿಡ್ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಸೋಂಕು ಇರುವುದನ್ನು ವೈದ್ಯರು ದೃಢಪಡಿಸಿದ್ದು, ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕು ದೃಢಪಟ್ಟ ಕಾರಣ ಕಳೆದ ಒಂದು ವಾರದಿಂದ ತನ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದವರು, ಕೋವಿಡ್ ತಪಾಸಣೆಗೆ ಒಳಗಾಗುವಂತೆ ಹಾಗೂ ಹೋಂ ಕ್ವಾರಂಟೈನ್ ಪಾಲಿಸುವಂತೆ ಗೌರಿಶಂಕರ್ ಮನವಿ ಮಾಡಿದ್ದಾರೆ.

ADVERTISEMENT

ಹುಟ್ಟುಹಬ್ಬದ ಆಚರಣೆ ರದ್ದು: ಗೌರಿಶಂಕರ್‌ಗೆ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣ ಸೆ.16ರಂದು ಅವರ ಹುಟ್ಟುಹಬ್ಬ ಆಚರಣೆಯನ್ನು ರದ್ದುಗೊಳಿಸಲಾಗಿದೆ. ಮುಖಂಡರು ಹಾಗೂ ಅಭಿಮಾನಿಗಳು ಸಹಕರಿಸುವಂತೆ ಕೋರಿರುವ ಅವರು, ಹುಟ್ಟುಹಬ್ಬದ ಬದಲಾಗಿ ಕಷ್ಟದಲ್ಲಿರುವವರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.

ಸಹೋದರನೊಂದಿಗೆ ಹುಟ್ಟಹಬ್ಬ: ಕೋವಿಡ್‌ನಿಂದ ಗುಣಮುಖರಾದ ನಂತರ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದು, ನವೆಂಬರ್‌ನಲ್ಲಿ ತಮ್ಮ ಸಹೋದರ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವೇಣುಗೋಪಾಲ್ ಅವರ ಹುಟ್ಟುಹಬ್ಬ ಇದ್ದು, ಆ ವೇಳೆ ತಾವು ಸಹ ಹುಟ್ಟಹಬ್ಬ ಆಚರಿಸಿಕೊಳ್ಳುವುದಾಗಿ ಶಾಸಕ ತಿಳಿಸಿದ್ದಾರೆ.

ನಾಳೆ ವಿಶೇಷ ಪೂಜೆ: ಶಾಸಕ ಡಿ.ಸಿ.ಗೌರಿಶಂಕರ್ ಅವರು ಶೀಘ್ರ ಗುಣಮುಖರಾಗುವಂತೆ ಕೋರಿ ಹಾಗೂ ಅವರ ಹುಟ್ಟುಹಬ್ಬದ ಅಂಗವಾಗಿ ಬುಧವಾರ(ಸೆ.16) ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ದೇಗುಲಗಳಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.