ADVERTISEMENT

ವಿನಯ ಕುಲಕರ್ಣಿ ಸೋದರನ ಕಾರು ಅಪಘಾತ: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 12:45 IST
Last Updated 12 ಏಪ್ರಿಲ್ 2021, 12:45 IST
ಘಟನೆಯಲ್ಲಿ ಹಾನಿಗೀಡಾಗಿರುವ ಕಾರು
ಘಟನೆಯಲ್ಲಿ ಹಾನಿಗೀಡಾಗಿರುವ ಕಾರು    

ಧಾರವಾಡ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ವಿನಯ ಕುಲಕರ್ಣಿ ಸೋದರ ವಿಜಯ ಕುಲಕರ್ಣಿ ಚಲಿಸುತ್ತಿದ್ದ ಕಾರು ಸೋಮವಾರ ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಉಳಿದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬೆಳಗಾವಿಯಿಂದ ಬರುತ್ತಿದ್ದ ಕಾರು ಇಲ್ಲಿನ ಕುಮಾರೇಶ್ವರ ನಗರದ ಕೆವಿಜಿ ಬ್ಯಾಂಕ್‌ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಹೊಡೆತಕ್ಕೆ ಚರಣ ನಾಯಕ್ (17) ಹಾಗೂ ಶೇಖರ ಹುದ್ದಾರ (40) ಮೃತಪಟ್ಟಿದ್ದಾರೆ. ಪರಸ್ಪರ ಸಂಬಂಧಿಗಳಾದ ಈ ಇಬ್ಬರು ದೇವರಹುಬ್ಬಳ್ಳಿ ಮೂಲದವರು. ಸದ್ಯ ಕುಮಾರೇಶ್ವರ ನಗರದ ನೆಲೆಸಿದ್ದರು.

ಬೆಳಗಾವಿಯಿಂದ ನಗರಕ್ಕೆ ಬರುತ್ತಿದ್ದ ಈ ಕಾರು (ಕೆಎ–25–ಪಿ–007) ವಿಜಯ ಕುಲಕರ್ಣಿ ಅವರಿಗೆ ಸೇರಿದ್ದು ಎನ್ನಲಾಗಿದೆ. ಈ ಸಂದರ್ಭದಲ್ಲಿ ಚಾಲಕ ಕಾರು ಚಲಾಯಿಸುತ್ತಿದ್ದರು. ವಿಜಯ ಕುಲಕರ್ಣಿ ಪಕ್ಕದ ಆಸನದಲ್ಲಿ ಇದ್ದರು ಎಂದೆನ್ನಲಾಗಿದೆ. ಅಪಘಾತ ನಡೆದ ಸಂದರ್ಭದಲ್ಲಿ ಕಾರಿನಿಂದ ಕೆಳಗಿದ ವಿಜಯ, ಕೆಲ ಹೊತ್ತು ನಿಂತು ಅಲ್ಲಿಂದ ಹೊರಟುಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಸಂಚಾರ ಠಾಣೆ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಮೃತ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು. ಸ್ಥಳದಲ್ಲಿ ಮತ್ತು ಆಸ್ಪತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾವಣೆಗೊಂಡಿದ್ದರು.

ADVERTISEMENT

2019ರಲ್ಲಿ ಕುಸಿದ ವಿನಯ ಕುಲಕರ್ಣಿ ಅವರ ಮಾವನಿಗೆ ಸೇರಿದ ಬಹುಮಹಡಿ ಕಟ್ಟಡದ ಕೆಲವೇ ದೂರದ ಅಂತರದಲ್ಲಿ ಈ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.