ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2019ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 465ನೇ ರ‍್ಯಾಂಕ್ ಪಡೆದ ವಿಜಯನಗರದ ಮೇಘನಾ ಕೆ.ಟಿ, ದೃಷ್ಟಿ ದೋಷದ ಮಧ್ಯೆಯೂ, ದೃಷ್ಟಿನೆಟ್ಟು ಪರೀಕ್ಷೆ ಬರೆದು ಗುರಿ ತಲುಪಿದ ಸಾಧಕಿ.
167ನೇ ರ‍್ಯಾಂಕ್ ಪಡೆದ ನಂದಿನಿ ಲೇಔಟ್ ನಿವಾಸಿ ಕೀರ್ತನಾ ಎಚ್.ಎಸ್, ಬಾಲನಟಿಯಾಗಿ 32 ಸಿನಿಮಾ, 48 ಧಾರಾವಾಹಿಗಳಲ್ಲಿ ನಟಿಸಿ ಮಿಂಚಿದವರು!
ಈ ಇಬ್ಬರೂ ಕೆಪಿಎಸ್‌ಸಿ ನಡೆಸಿದ 2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ. ಕೀರ್ತನಾ ಸದ್ಯ ತಹಶೀಲ್ದಾರ್, ಮೇಘನಾ ಜಿಲ್ಲಾ ಖಜಾನಾಧಿಕಾರಿ.
ವಿಶೇಷ ಸಾಧಕಿ ಮೇಘನಾ: ಸಿರಾಮಿಕ್ಸ್ ಉದ್ಯಮಿ ತಾಂಡವಮೂರ್ತಿ ಮತ್ತು ಗೃಹಿಣಿ ನವನೀತಾ ದಂಪತಿಯ ಪುತ್ರಿಯಾಗಿರುವ ಮೇಘನಾ ಅವರ ಮೂಲ ಮೈಸೂರು. ಕೆಂಗೇರಿಯ ಜ್ಞಾನಬೋಧಿನಿ ಶಾಲೆಯಲ್ಲಿ ಶಾಲಾ ಶಿಕ್ಷಣ, ಜೈನ್ ಕಾಲೇಜಿನಲ್ಲಿ ಪಿಯು, ಸುರಾನಾ ಕಾಲೇಜಿನಲ್ಲಿ ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು ಆಂಗ್ಲ ವಿಷಯದಲ್ಲಿ ಪದವಿ ಮುಗಿಸಿರುವ ಮೇಘನಾ, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಆಂಗ್ಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
‘ನನಗೆ ದೃಷ್ಟಿ ದೋಷವಿದೆ. ಕೇಳಿಸಿಕೊಂಡು ಓದು ಮತ್ತು ಬರವಣಿಗೆ ಮಾಡುತ್ತೇನೆ. ವೈದ್ಯಕೀಯವಾಗಿ ಶೇ 75ರಿಂದ 100ರಷ್ಟು ದೃಷ್ಟಿ ದೋಷವಿದೆ. ಪದವಿ ಓದುತ್ತಿದ್ದಾಗಲೇ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಅಂದುಕೊಂಡಿದ್ದೆ. ಹೀಗಾಗಿ, ರಾಜ್‌ಕುಮಾರ್ ಅಕಾಡೆಮಿಗೆ ತರಬೇತಿಗೆ ಸೇರಿಕೊಂಡೆ. ಆನ್‌ಲೈನ್ ಮೂಲಕ ಲಭ್ಯವಿರುವ ಕಲಿಕಾ ಸಾಧನಗಳನ್ನೂ ಬಳಸಿಕೊಂಡು ಸ್ವಂತವಾಗಿ ಪರೀಕ್ಷೆಗೆ ತಯಾರಿ ನಡೆಸಿದೆ. 2018ರಲ್ಲಿ ಮೊದಲ ಯತ್ನದಲ್ಲಿ ಸಂದರ್ಶನಕ್ಕೆ ಆಯ್ಕೆಯಾಗಿದ್ದೆ. ಎರಡನೇ ಯತ್ನದಲ್ಲಿ ಯಶಸ್ಸು ಕಾಣಲು ಇದರಿಂದ ಸಹಾಯವಾಯಿತು. ಕನಿಷ್ಠ ಒಂದು ವರ್ಷ ಕಠಿಣ ಪರಿಶ್ರಮ
ಪಟ್ಟರೆ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆ ಆಗಬಹುದು’ ಎಂದರು.
ಕೀರ್ತನಾ ಸಾಧನೆ: ಕುಣಿಗಲ್ ತಾಲ್ಲೂಕು ಹೊಸ್ಕೆರೆ ಗ್ರಾಮದವರಾದ ಕೀರ್ತನಾ ಅವರ ತಂದೆ ಶ್ರೀನಿವಾಸ್ ಮೈಸೂರು ಲ್ಯಾಂಪ್ಸ್ ಉದ್ಯೋಗಿಯಾಗಿದ್ದರು. ಆರು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ತಾಯಿ ಚಂದ್ರಮ್ಮ. ತಮ್ಮ ಡಾ. ದೇವ್‌ಕುಮಾರ್ ವಿಕ್ರಂ ಆಸ್ಪತ್ರೆಯಲ್ಲಿ ವೈದ್ಯ.
‘ಬಾಲ್ಯದಲ್ಲಿ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಶಿವರಾಜ್‌ಕುಮಾರ್, ಉಪೇಂದ್ರ, ರಮೇಶ್ ಅರವಿಂದ್ ಸೇರಿದಂತೆ ಬಹುತೇಕ ಎಲ್ಲ ನಟರ ಜೊತೆ ನಟಿಸಿದ್ದೇನೆ. ಕೇಂದ್ರ ಸರ್ಕಾರದಿಂದ 2005ರಲ್ಲಿ ರಾಷ್ಟ್ರೀಯ ಬಾಲಪುರಸ್ಕಾರ ಸಿಕ್ಕಿದೆ. 15ನೇ ವಯಸ್ಸಿನವರೆಗೆ ಬಣ್ಣದ ಲೋಕದಲ್ಲಿದ್ದೆ. ಬಳಿಕ ನನ್ನ ದಾರಿ ಬದಲಿಸಿಕೊಂಡು ಎಸ್‌ಜೆಬಿಐಟಿಯಲ್ಲಿ ಎಂಜಿನಿಯರಿಂಗ್ ಮುಗಿಸಿದೆ’ ಎಂದರು ಕೀರ್ತನಾ.
‘ನಾನು ಐಎಎಸ್ ಮಾಡಬೇಕು ಎನ್ನುವುದು ಅಪ್ಪನ ಗುರಿ ಆಗಿತ್ತು. ಎಂಜಿನಿಯರಿಂಗ್ ಮುಗಿಸಿದ ಬಳಿಕ ಕಂಪನಿಯೊಂದರಲ್ಲಿ ಕೆಲಸ ಮಾಡಿದೆ. 5 ವರ್ಷ ಮಾರ್ಕೆಟಿಂಗ್ ಕ್ಷೇತ್ರದಲ್ಲಿದ್ದೆ. ರಾಜ್‌ಕುಮಾರ್ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿದಾರಳಾಗಿಯೂ ಕೆಲಸ ಮಾಡಿದೆ. ಆದರೆ, ಪ್ರಯತ್ನಗಳೆಲ್ಲ ವಿಫಲವಾದಾಗ ಕಳೆದೊಂದು ವರ್ಷದಿಂದ ಎಲ್ಲವನ್ನೂ ಬದಿಗಿಟ್ಟೆ. ಆರನೇ ಯತ್ನದಲ್ಲಿ ಮುಖ್ಯಪರೀಕ್ಷೆ ಮತ್ತು ಸಂದರ್ಶನದಲ್ಲಿ ಯಶಸ್ಸು ಸಾಧಿಸಿದೆ ಎಂದು ಖುಷಿಯಿಂದ ಹೇಳಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.