ಎಂ.ಬಿ.ಪಾಟೀಲ
ಬೆಂಗಳೂರು: ಉನ್ನತ ಶಿಕ್ಷಣ, ತಂತ್ರಜ್ಞಾನ, ಕೈಗಾರಿಕಾ ಕ್ಷೇತ್ರ ಸೇರಿದಂತೆ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ ಕುರಿತು ಅಮೆರಿಕ ಹಾಗೂ ಪೋಲೆಂಡ್ ದೇಶಗಳ ಪ್ರತಿನಿಧಿಗಳ ಜತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಬುಧವಾರ ಚರ್ಚೆ ನಡೆಸಿದರು.
ಭಾರತದಲ್ಲಿನ ಅಮೆರಿಕನ್ ಕಾನ್ಸುಲ್ ಜನರಲ್ ಕ್ರಿಸ್ ಹಾಡ್ಜಸ್ ಮತ್ತು ಪೋಲೆಂಡ್ ದೇಶದ ಡಿಜಿಟಲೀಕರಣ ಖಾತೆ ಸಹಾಯಕ ಸಚಿವ ರಫಾಲ್ ರೊಸಿನ್ಸ್ಕಿಅವರ ಜತೆ ಪ್ರತ್ಯೇಕ ಮಾತುಕತೆ ನಡೆಸಿದ ಅವರು, ರಾಜ್ಯದಲ್ಲಿ ಹೂಡಿಕೆ ಮಾಡಲು ಇರುವ ಅವಕಾಶಗಳ ಕುರಿತು ಮನವರಿಕೆ ಮಾಡಿಕೊಟ್ಟರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಮೆರಿಕದ ವಿಶ್ವವಿದ್ಯಾಲಯಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಮೆಡ್-ಟೆಕ್ ಕಂಪನಿಗಳಿಗೆ ರಾಜ್ಯದಲ್ಲಿ ವಿಪುಲ ಅವಕಾಶಗಳಿದ್ದು, ಸಹಭಾಗಿತ್ವದಿಂದ ಹೆಚ್ಚು ಅನುಕೂಲವಾಗಲಿದೆ’ ಎಂದರು.
‘ಪೋಲೆಂಡ್‌ನ ಉನ್ನತ ಶಿಕ್ಷಣ, ಸಂಶೋಧನೆ, ಆಧುನಿಕ ತಂತ್ರಜ್ಞಾನ, ವಾಣಿಜ್ಯ, ತಂತ್ರಜ್ಞಾನ ಮತ್ತು ರಕ್ಷಣಾ ಉದ್ಯಮಗಳಲ್ಲಿ ಕರ್ನಾಟಕದೊಂದಿಗೆ ಸಹಭಾಗಿತ್ವ ಹೊಂದಲು ಇರುವ ಅವಕಾಶಗಳ ಕುರಿತು ಚರ್ಚೆ ನಡೆಸಲಾಯಿತು. ಭಾರತ ಮತ್ತು ಪೋಲೆಂಡ್ 2023ರಿಂದ 2028ರವರೆಗೆ ಚಾಲ್ತಿಯಲ್ಲಿರುವ ಐದು ವರ್ಷಗಳ ಕ್ರಿಯಾ ಯೋಜನೆಯನ್ನು ಹೊಂದಿವೆ. ಗಣಿಗಾರಿಕೆ, ಸೈಬರ್ ಭದ್ರತೆ, ಆರೋಗ್ಯ, ಇಂಧನ ಮತ್ತು ಸುಸ್ಥಿರತೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುತ್ತಿವೆ. ಮುಂದಿನ ಹಂತಕ್ಕೆ ಕೊಂಡೊಯ್ಯಲು ಪೋಲೆಂಡ್ ಒಲವು ತೋರಿದೆ. ರಾಜ್ಯದ ಕೈಗಾರಿಕಾ ಕಾರ್ಯಪರಿಸರ, ನೀತಿ, ರಿಯಾಯಿತಿ ಕುರಿತು ವಿವರಿಸಲಾಯಿತು’ ಎಂದು ಮಾಹಿತಿ ನೀಡಿದರು.
ನಿಯೋಗದಲ್ಲಿ ಪೋಲೆಂಡ್ ರಾಯಭಾರ ಕಚೇರಿಯ ಮುಖ್ಯಸ್ಥ ಪಿಯೋಟರ್ ಸ್ವಿಟೈಸ್ಕಿ, ಟೋಮಾಸ್ ವೆಲ್ಗೋಮಾಸ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.