
ಭೂಕುಸಿತ ಕಂಡಿದ್ದ ಹೊನ್ನಾವರ ತಾಲೂಕು ನಿಟ್ಟಡಗಿ ಸಮೀಪದ ರಸ್ತೆ
ಬೆಂಗಳೂರು: ಆರು ದಶಕದ ಹಿಂದೆಯೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಶೋಧ ನಡೆಸಿ ಬಾಕ್ಸೈಟ್ ಇರುವುದನ್ನು ಖಚಿತಪಡಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡ– ಮುಗಳಿ ಸಾಗರ ವನ್ಯಜೀವಿ ಧಾಮ ಸಮೀಪದಲ್ಲೇ ಈಗ ಬಾಕ್ಸೈಟ್ ಗಣಿಗಾರಿಕೆ ನಡೆಸುವ ಪ್ರಯತ್ನಗಳು ಶುರುವಾಗಿವೆ.
ಮಿತಿ ಮೀರಿದ ಅಭಿವೃದ್ಧಿ, ಗಣಿಗಾರಿಕೆ ಚಟುವಟಿಕೆ ಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದ ಭೀತಿ ಉಂಟಾಗಿದ್ದು ಹೊಸ ಯೋಜನೆಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಶರಾವತಿ ನದಿ ಸಮೀಪದಲ್ಲೇ ಇರುವ, ಕೆಲವು ವರ್ಷಗಳ ಹಿಂದೆ ಭೂಕುಸಿತ ಉಂಟಾಗಿದ್ದ ಸ್ಥಳದಿಂದ 2 ಕಿ.ಮೀ. ದೂರದಲ್ಲಿಯೇ ಗಣಿಗಾರಿಕೆ ಆರಂಭಿಸುವ ಯತ್ನಕ್ಕೆ ಪರಿಸರ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
2025ರ ಆರಂಭದಲ್ಲಿ ಕೇಂದ್ರ ಗಣಿ ಸಚಿವಾಲಯದ ತಾಂತ್ರಿಕ ಸಮಿತಿಯು ದೇಶದ ನಾನಾ ಭಾಗಗಳಲ್ಲಿ ಖನಿಜಗಳ ಲಭ್ಯತೆ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು. ಬಳಿಕ ಆಸಕ್ತ ಗಣಿ ಕಂಪನಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ತಾಂತ್ರಿಕ ಸಮಿತಿ ಮುಂದೆ ಸಲ್ಲಿಸಿವೆ.
ಮಹಾರಾಷ್ಟ್ರದ ನಾಗ್ಪುರದ ಪಿಆರ್‌ಬಿ ಇನ್ಫ್ರಾ ಪ್ರಾಜೆಕ್ಟ್ಸ್ ಕಂಪನಿ ಇಡಗುಂಜಿ ಸಮೀಪದ ನಿಟ್ಟಡಗಿ ಭಾಗದಲ್ಲಿ ಬಾಕ್ಸೈಟ್ ಗಣಿಗಾರಿಕೆ ಆರಂಭಿಸುವ ಯೋಚನೆಯಲ್ಲಿದೆ. ರಾಷ್ಟ್ರೀಯ ಖನಿಜ ಶೋಧನೆ ಟ್ರಸ್ಟ್
(ಎನ್‌ಎಂಇಟಿ) ಯೋಜನೆಯಡಿ ಪ್ರಾಥಮಿಕ ಸಮೀಕ್ಷೆ ನಡೆಸಲು ಅನುಮತಿ ಕೋರಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವುದಕ್ಕೆ ಸ್ಥಳೀಯವಾಗಿಯೂ ವಿರೋಧ ವ್ಯಕ್ತವಾಗುತ್ತಿದೆ.
1964 ರಿಂದ 1973ರವರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಈ ಭಾಗದಲ್ಲಿ ಶೋಧನೆ ನಡೆಸಿದಾಗ 13.4 ಲಕ್ಷ ಟನ್ ಹಾಗೂ 2016–17ರಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಕೈಗೊಂಡಿದ್ದ ಸಮೀಕ್ಷೆ ವೇಳೆ 90 ಲಕ್ಷ ಟನ್ ಬಾಕ್ಸೈಟ್ (ಅಲ್ಯುಮಿನಿಯಂ ಲ್ಯಾಟರೈಟ್) ಇರುವುದು ಖಚಿತವಾಗಿತ್ತು. ಇದಕ್ಕೆ ಈವರೆಗೂ ಅನುಮತಿ ಸಿಕ್ಕಿಲ್ಲ. ಈಗ ಶೋಧನೆಯ ಪ್ರಯತ್ನದೊಂದಿಗೆ ಗಣಿಗಾರಿಕೆ ನಡೆಸುವ ಸಾಧ್ಯತೆಗಳಿವೆ.
ಹಿಂದೆಲ್ಲಾ ಕರ್ನಾಟಕದಲ್ಲಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಉದ್ದೇಶದ ಸ್ಥಳ ಪೂರ್ವ ಸಮೀಕ್ಷೆಗೆ ಸ್ಥಳೀಯವಾಗಿಯೇ ಅನುಮತಿ ನೀಡಲಾಗುತ್ತಿತ್ತು. ಈಗ ಆಯಾ ವಿಭಾಗದಿಂದ ಸ್ಥಳ ಪರಿಶೀಲನೆ ನಡೆಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂರಕ್ಷಣೆ) ಅವರಿಗೆ ವರದಿ ಸಲ್ಲಿಸಲಾಗುತ್ತದೆ. ವರದಿ ಆಧರಿಸಿ ಪೂರ್ವ ಸಮೀಕ್ಷೆಗೆ ಅವರು ಅನುಮತಿ ನೀಡುತ್ತಾರೆ. ಬೇಡಿಕೆ ಆಧರಿಸಿ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಅಂತಿಮ ವರದಿಯನ್ನು ಇಲಾಖೆಗೆ ಸಲ್ಲಿಸಲಿದ್ದಾರೆ.
‘ಉತ್ತರ ಕನ್ನಡ ಜಿಲ್ಲೆಯ ಯಾಣ, ಯಲ್ಲಾಪುರದ ಅರೇಬೈಲ್ ಸಹಿತ ಹಲವು ಕಡೆಗಳಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸಲು ಬೇಡಿಕೆಯಿದೆ. ಹೊನ್ನಾವರ ತಾಲ್ಲೂಕಿನ ಅತಿ ಸೂಕ್ಷ್ಮ ಅರಣ್ಯ ಭಾಗ ಎನ್ನಿಸಿರುವ, 2 ವರ್ಷದ ಹಿಂದೆ ಭೂಕುಸಿತ ಆಗಿರುವ ಕಾಸರಕೋಡಿ ಅಪ್ಸರಕೊಂಡ ಪ್ರದೇಶಕ್ಕೆ ಹೊಂದಿಕೊಂಡ ಇಡಗುಂಜಿ ಭಾಗದಲ್ಲಿ ಬಾಕ್ಸೈಟ್ ಗಣಿಗಾರಿಕೆ ಸಮೀಕ್ಷೆಗೆ ಖಾಸಗಿ ಕಂಪನಿಗಳು ತಯಾರಿ ನಡೆಸಿವೆ. ಅನುಮತಿ ಕೊಟ್ಟರೆ ಶರಾವತಿ ನದಿ ತೀರದಲ್ಲೇ ಅನಾಹುತಗಳು ಕಟ್ಟಿಟ್ಟ ಬುತ್ತಿ. ಶೋಧನೆಗೆ ಅನುಮತಿ ನೀಡದಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೇವೆ’ ಎಂದು ಪರಿಸರ ಹೋರಾಟಗಾರ ಅನಂತ ಹೆಗಡೆ ಆಶೀಸರ ತಿಳಿಸಿದರು.
ಮುಖ್ಯಾಂಶಗಳು
440 ಹೆಕ್ಟೇರ್ ಪ್ರದೇಶದಲ್ಲಿ ಶೋಧ
30 ಕಡೆ 20 ಮೀಟರ್ ಆಳದ ಗುಂಡಿ
ಶೋಧನಾ ವೆಚ್ಚ ₹1.4 ಕೋಟಿ
ಹೊನ್ನಾವರ ತಾಲ್ಲೂಕಿನಲ್ಲಿ ಬಾಕ್ಸೈಟ್ ಖನಿಜ ಶೋಧನೆಗೆ ಮಹಾರಾಷ್ಟ್ರ ಕಂಪನಿಯಿಂದ ಬೇಡಿಕೆ ಬಂದಿದೆ. ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ವರದಿ ಸಲ್ಲಿಸುತ್ತೇನೆಸಿ.ಕೆ.ಯೋಗೀಶ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೊನ್ನಾವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.