ADVERTISEMENT

ಲಂಚದ ಹಣದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಆರೋಪ; ಎಂ.ಬಿ.ಪಾಟೀಲ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 6:27 IST
Last Updated 13 ಜನವರಿ 2019, 6:27 IST
   

ಹುಬ್ಬಳ್ಳಿ: 'ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವು ಲಂಚದ ಹಣದಲ್ಲಿ ನಡೆದಿದೆ' ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಗೃಹ ಸಚಿವ ಎಂ.ಬಿ.ಪಾಟೀಲ ತೀವ್ರ ವಿರೋಧ ವ್ಯಕ್ತಪಡಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವು ಸಮಾಜದ ಜನತೆಯ ಅಸ್ಮಿತೆಯ ಹೋರಾಟವಾಗಿದೆ. ಇದು ಯಾವುದೇ ರಾಜಕೀಯ ಪ್ರೇರಿತ ಹೋರಾಟವಲ್ಲ. ಇಂತಹ ಹೇಳಿಕೆ ನೀಡುವ ಮೂಲಕ ಶಾಮನೂರು ಅವರು ತಮ್ಮ ವ್ಯಕ್ತಿತ್ವ ಪ್ರದರ್ಶನ ಮಾಡಿದ್ದಾರೆ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಭಾಗವಹಿಸಿದ್ದ ವಿನಯ ಕುಲಕರ್ಣಿ, ಶರಣ. ಪ್ರಕಾಶ ಪಾಟೀಲ ವಿಧಾನ ಸಭೆ ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಶಾಮನೂರು ಹೇಳಿಕೆ ನೀಡಿದ್ದಾರೆ. ಹಾಗಾದರೆ, ಇವರ ಮಗ ಮಲ್ಲಿಕಾರ್ಜುನ ಯಾವ ಕಾರಣಕ್ಕಾಗಿ ಸೋತರು. ಇವರ ವೀರಶೈವ ಬಲ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ಹಾಗೂ ಹೋರಾಟಗಾರರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಶಾಮನೂರು ನಿಲ್ಲಿಸದಿದ್ದರೆ ನಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ದಾವಣಗೆರೆ ಬಾಪೂಜಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಕೊಟ್ಟೂರು ಬಸಪ್ಪ ವಿದೇಶಕ್ಕೆ ಹೋಗಿದ್ದಾಗ ಮೋಸದಿಂದ ಶಾಮನೂರು ಅದರ ಅಧ್ಯಕ್ಷರಾಗಿರುವುದು ನಮಗೂ ತಿಳಿದಿದೆ ಎಂದು ಕುಟುಕಿದರು.

ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಘಟಬಂಧನದಿಂದ ಅಂಜಿರುವ ಪ್ರಧಾನಿ ಮೋದಿ ಅವರು, ಸಮ್ಮಿಶ್ರ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಬರಬಾರದು ಎಂಬ ಕಾರಣಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.

ಪೊಲೀಸ್ ಕಾನ್ ಸ್ಟೆಬಲ್ ಗೃಹ ಇಲಾಖೆಯ ಬೆನ್ನೆಲುಬುಗಾಗಿದ್ದಾರೆ. ಅವರ ಜೀವನಮಟ್ಟ ಸುಧಾರಣೆಗಾಗಿ ಔರಾದಕರ್ ಸಮಿತಿ ವರದಿ ಜಾರಿಗೆ ಸಚಿವ ಸಂಪುಟ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.

ರಾಜ್ಯದ ಕಾಣೆಯಾಗಿರುವ ಮೀನುಗಾರರು ಪತ್ತೆಯಾಗಿವೆ ಇಸ್ರೋ ನೆರವು ಕೋರಲಾಗಿದೆ. ಜೊತೆಗೆ ಮಹಾರಾಷ್ಟ್ರ ಸರ್ಕಾರದ ನೆರವು ಕೋರಲಾಗಿದೆ. ಈ ವಾರದಲ್ಲಿ ಮಹಾರಾಷ್ಟ್ರ ಗೃಹಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.