ADVERTISEMENT

400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ: ಸಂದರ್ಶನ ಇಲ್ಲ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 23:08 IST
Last Updated 27 ಅಕ್ಟೋಬರ್ 2025, 23:08 IST
   

ಬೆಂಗಳೂರು: ‘ಪಶು ವೈದ್ಯಾಧಿಕಾರಿಗಳ 400 ಹುದ್ದೆಗಳ ಭರ್ತಿಗೆ ಸಂದರ್ಶನ ಇಲ್ಲದೆ, ಕೇವಲ ಅಂಕಗಳ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿಗೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿನ ಪಶು ವೈದ್ಯಾಧಿಕಾರಿ ಹುದ್ದೆಗಳು ಗ್ರೂಪ್ ‘ಎ’ ವರ್ಗದ ಹುದ್ದೆಗಳಾಗಿರುವುದರಿಂದ ಈ ಹುದ್ದೆಗಳಿಗೆ ವ್ಯಕ್ತಿತ್ವ ಪರೀಕ್ಷೆಯ (ಸಂದರ್ಶನ) ಸಹಿತ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವುದು ಸೂಕ್ತ ಎಂದು ಆಯೋಗ ತೀರ್ಮಾನಿಸಿದೆ. ಹೀಗಾಗಿ, ಈ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಭರ್ತಿ ಮಾಡುವ ಕುರಿತು ಪ್ರಸ್ತಾವವನ್ನು ಮತ್ತೊಮ್ಮೆ ಸಲ್ಲಿಸುವಂತೆ ಕೆಪಿಎಸ್‌ಸಿ 2023ರ ಆಗಸ್ಟ್‌ 4ರಂದು ಇಲಾಖೆಗೆ ಪತ್ರ ಬರೆದಿತ್ತು.

ಇಲಾಖೆಯು ಈ ಪತ್ರದಲ್ಲಿನ ಅಂಶಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ (ಡಿಪಿಎಆರ್) ಅಭಿಪ್ರಾಯ ಕೋರಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಡಿಪಿಎಆರ್ (ಸೇವಾ ನಿಯಮಗಳು), ‘2020–21ರ ನೇರ ನೇಮಕಾತಿ ನಿಯಮಗಳ ನಿಯಮ 5ರಲ್ಲಿ ವಿವರಿಸಿರುವ ಆಯ್ಕೆ ವಿಧಾನಗಳ ಅನ್ವಯ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡವಾರು ಪ್ರಮಾಣದ ಆಧಾರದಲ್ಲಿ ಮಾತ್ರ ಹುದ್ದೆಗಳ ಆಯ್ಕೆ ಕೈಗೊಳ್ಳಬೇಕು’ ಎಂದು ತಿಳಿಸಿದೆ.

ADVERTISEMENT

ಡಿಪಿಎಆರ್‌ ನೀಡಿದ್ದ ಈ ಅಭಿಪ್ರಾಯ ಉಲ್ಲೇಖಿಸಿ ಕೆಪಿಎಸ್‌ಸಿಗೆ ಪತ್ರ ಬರೆದಿರುವ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ, ‘400 ಪಶು ವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಸಂದರ್ಶನವಿಲ್ಲದೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಬೇಕು’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.