ಬೆಂಗಳೂರು: ದೇವಸ್ಥಾನ ಹಾಗೂ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಸರ್ಕಾರದ ಸುಪರ್ದಿಯಿಂದ ಮುಕ್ತಗೊಳಿಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಮುಖಂಡರು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ –1997 ಮತ್ತು ಅದರ ತಿದ್ದುಪಡಿಗಳು ಸಂವಿಧಾನ ಬದ್ಧವಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಘೋಷಿಸಿದ್ದು, ಕರ್ನಾಟಕ ಹಿಂದೂ ದೇವಸ್ಥಾನಗಳ ಆಡಳಿತಕ್ಕೆ ಸಂವಿಧಾನಬದ್ಧವಾದ ಒಂದು ಹೊಸ ವ್ಯವಸ್ಥೆ ರೂಪಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿದರು.
ಸಂವಿಧಾನದ ಪ್ರಕಾರ ಭಾರತದ ಭೂಪ್ರದೇಶದೊಳಗೆ ಯಾವುದೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆಯನ್ನು ಅಥವಾ ಕಾನೂನುಗಳ ಸಮಾನ ರಕ್ಷಣೆಯನ್ನು ರಾಜ್ಯವು ನಿರಾಕರಿಸಬಾರದು. ಖಾಸಗಿ ದೇವಸ್ಥಾನಗಳು, ಖಾಸಗಿ ಟ್ರಸ್ಟ್‌ಗಳ ಮತ್ತು ಕುಟುಂಬದ ದೇವಸ್ಥಾನಗಳು, ಮಠಗಳ ಮೇಲೆ ಸರ್ಕಾರದ ನಿಯಂತ್ರಣವಿಲ್ಲ. ಆದರೆ, ಮುಜರಾಯಿ ಇಲಾಖೆಯ ನಿಯಂತ್ರಣದಲ್ಲಿ ಹಲವು ಹಿಂದೂ ದೇವಸ್ಥಾನಗಳಿವೆ. ಈ ದೇವಸ್ಥಾನಗಳ ಆಡಳಿತಗಳು ಕಾನೂನಿನ ಎದುರು ಸಮಾನವಾಗಿಲ್ಲ. ನಿಯಂತ್ರಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಹಾಗಾಗಿ, ಅವುಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಬೇಕು ಎಂದು ಮನವಿ ಮಾಡಿದರು.
ಪರಿಷತ್ ಮುಖಂಡರಾದ ಸ್ಥಾನು ಮಲಯನ್, ದೀಪಕ್ ರಾಜಗೋಪಾಲ್, ಬಿ.ಸುರೇಶ್, ಮುನಿರಾಜು, ಗಂಗಾಧರ್ ಹೆಗಡೆ, ಶಿವಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.