ADVERTISEMENT

ದುಡ್ಡು ಚೆಲ್ಲದೆ ಚುನಾವಣೆ ಗೆಲ್ಲಿ ನೋಡೋಣ: ಹೊರಟ್ಟಿ

6ನೇ ವೇತನ ಆಯೋಗ ಜಾರಿಗೆ ತಂದವರಿಗೇ ₹ 5 ಸಾವಿರ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:59 IST
Last Updated 13 ಮಾರ್ಚ್ 2020, 19:59 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ‘ಸರ್ಕಾರಿ ನೌಕರರಿಗೆ ಆರನೇ ವೇತನ ಆಯೋಗವನ್ನು ಜಾರಿಗೆ ತಂದ ಸಿದ್ದರಾಮಯ್ಯ ಅವರಿಂದಲೇ ಸರ್ಕಾರಿ ನೌಕರರು ಬಾದಾಮಿ ಚುನಾವಣೆಯಲ್ಲಿ ಅಂಚೆ ಮತದಾನಕ್ಕಾಗಿ ₹ 5 ಸಾವಿರ ಬೇಡಿಕೆ ಇಟ್ಟಿದ್ದರು’ ಎಂಬ ಮಾಹಿತಿಯನ್ನು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕಎಸ್‌.ಆರ್‌.ಪಾಟೀಲ ಬಹಿರಂಗಪಡಿಸಿದರು.

ಶುಕ್ರವಾರ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು ಸಂವಿಧಾನ ಕುರಿತು ಭಾಷಣ ಮಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಅವರು, ‘ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಸರ್ಕಾರಿ ಸಿಬ್ಬಂದಿಯೇ ಮತಕ್ಕಾಗಿ ತಮ್ಮನ್ನು ಮಾರಿಕೊಂಡರೆ, ಅದೂ ತಮಗೆ ಉಪಕಾರ ಮಾಡಿದವನನ್ನೇ ಮರೆತು ದುಡ್ಡು ಕೇಳಿದರೆ ಏನೆನ್ನಬೇಕು, ನಮ್ಮ ಸ್ಥಿತಿ ಎಲ್ಲಿಗೆ ತಲುಪಿದೆ?’ ಎಂದರು.

‘ರೇಟ್‌ ಕಡಿಮೆ ಇತ್ತು, ನೀವು ಬಂದ ನಂತರ ಜಾಸ್ತಿಯಾಗಿದೆ’ ಎಂದು ಜೆಡಿಎಸ್‌ನ ಕೆ.ಟಿ.ಶೀಕಂಠೇಗೌಡ ಬಿಜೆಪಿ ಸದಸ್ಯರ ಕಾಲೆಳೆದರು.

ADVERTISEMENT

‘ದುಡ್ಡಿಗಾಗಿ ಮತವನ್ನು ಮಾರಿಕೊಳ್ಳುವ ಪರಿಪಾಠ ನೋಡಿದರೆ ಒಂದು ವಿಶ್ವವಿದ್ಯಾಲಯವನ್ನೇ ಏಕೆ ಆರಂಭಿಸಬಾರದು?’ ಎಂದು ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.

ಬಿಜೆಪಿಯ ಆಯನೂರು ಮಂಜುನಾಥ್‌ ಅವರು ಸುಮಿತ್ರಾ ದೇಸಾಯಿ ಪ್ರಕರಣವನ್ನು ನೆನಪಿಸಿ, ಮನವಿ ನೀಡಲು ಬಂದ ಆಕೆ ಕಾಣೆಯಾಗಿದ್ದರಿಂದಲೇ ಮನನೊಂದ ಆರ್‌.ಡಿ.ಕಿತ್ತೂರು ರಾಜೀನಾಮೆ ನೀಡಿದ್ದರು, ಅಂತಹ ಸ್ಥಿತಿಯನ್ನು ಇಂದು ಊಹಿಸಲೂ ಸಾಧ್ಯವಿಲ್ಲ ಎಂದರು.

ಆಪರೇಷನ್‌ ಸಿದ್ದರಾಮಯ್ಯ‌
‘ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ನಾಯಕರು ಮಾಡಿದ ತಪ್ಪಿಗಾಗಿ ನೀವು ಅಧಿಕಾರಕ್ಕೆ ಬಂದಿರಿ’ ಎಂದು ಬಸವರಾಜ ಹೊರಟ್ಟಿ ಬಿಜೆಪಿ ಸದಸ್ಯರಿಗೆ ಹೇಳಿದಾಗ, ‘ಅದನ್ನು ಆಪರೇಷನ್ ಬಿಜೆಪಿ ಎಂದು ಕರೆಯಬೇಡಿ, ಆಪರೇಷನ್‌ ಸಿದ್ದರಾಮಯ್ಯ ಎಂದು ಕರೆಯಿರಿ’ ಎಂದು ಆಯನೂರು ಮಂಜುನಾಥ್‌ ಕಿಚಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.