ವಿಧಾನಸೌಧ ಹಾಗೂ ವಿಧಾನಸೌಧದ ಆವರಣದಲ್ಲಿ ನಾಯಿಗಳು
– ಪ್ರಜಾವಾಣಿ ಚಿತ್ರ
ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಹಾಗೂ ಶಾಸಕರ ಭವನದಲ್ಲಿ ತಿರುಗಾಡುವ ನಾಯಿಗಳನ್ನು ತೆರವುಗೊಳಿಸಬೇಕು ಎಂದು ವಿಧಾನಸಭೆಯ ಸದಸ್ಯರು ಸ್ಪೀಕರ್ ಯು.ಟಿ ಖಾದರ್ ಅವರೊಂದಿಗೆ ಮನವಿ ಮಾಡಿದರು.
ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ ಸುರೇಶ್ ಬಾಬು ಅವರ ಈ ವಿಷಯವನ್ನು ಪ್ರಸ್ತಾಪಿಸಿದರು.
‘ಸುಪ್ರೀಂ ಕೋರ್ಟ್ ತೀರ್ಪು ರಾಜ್ಯದಲ್ಲಿರುವ ಎಲ್ಲಾ ಪುರಸಭೆಗಳಿಗೂ ಅನ್ವಯವಾಗಬೇಕು. ನಮ್ಮ ಮಕ್ಕಳನ್ನು ಸುರಕ್ಷಿತವಾಗಿಡಲು ನಾಯಿಗಳನ್ನು ಸ್ಥಳಾಂತರಿಸಬೇಕು. ನಾಯಿಗಳಿಗೆ ಬಿರಿಯಾನಿ ಹಾಕುವ ಬದಲು ಅವುಗಳನ್ನು ಸೆರೆಹಿಡಿಯಬೇಕು’ ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಎಸ್. ಸುರೇಶ್ ಕುಮಾರ್, ‘ಸುಪ್ರೀಂ ಕೋರ್ಟ್‌ನ ಆದೇಶ ಇಡೀ ದೇಶಕ್ಕೆ ಅನ್ವಯ. ಕೇವಲ 6 ತಿಂಗಳಲ್ಲಿ ಬೆಂಗಳೂರಿನಲ್ಲಿ 18 ಸಾವಿರ ನಾಯಿ ಕಡಿತದ ಪ್ರಕರಣ ದಾಖಲಾಗಿದೆ. 18 ಮಂದಿಗೆ ರೇಬಿಸ್ ತಗುಲಿದೆ. ಕೋರ್ಟ್ ಆದೇಶ ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಇತರ ನಗರಗಳಿಗೂ ಅನ್ವಯಿಸಬೇಕು’ ಎಂದರು.
‘ವಿಧಾನಸೌಧಕ್ಕೂ ಅನ್ವಯಿಸಬೇಕು’ ಎಂದು ವಿಧಾನಸೌಧದ ಆವರಣದಲ್ಲಿ ನಾಯಿಗಳು ಓಡಾಡುತ್ತಿರುವುದನ್ನು ಉಲ್ಲೇಖಿಸಿ ಸ್ಪೀಕರ್ ಖಾದರ್ ಹೇಳಿದರು.
‘ತುಂಬಾ ಬೀದಿನಾಯಿಗಳಿವೆ. ನಾಯಿ ಕಡಿತದ ಎರಡು ಲಕ್ಷ ಪ್ರಕರಣಗಳು ವರದಿಯಾಗಿವೆ. ಇದು ಗಂಭೀರ ವಿಷಯ. ನಾಯಿಯ ಬಗ್ಗೆ ಕರುಣೆ ತೋರುವ ಟ್ವೀಟ್ ಒಂದನ್ನು ಮುಖ್ಯಮಂತ್ರಿ ಮಾಡಿದ್ದಾರೆ. ನಾಯಿ ಪ್ರೇಮಿಗಳ ಮನೆಯಲ್ಲಿ ಅವುಗಳನ್ನು ಬಿಡೋಣ’ ಎಂದು ಬಿಜೆಪಿಯ ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.
ಶಾಸಕರ ಭವನದಲ್ಲೂ ನಾಯಿಗಳ ಉಪಟಳವಿದ್ದು, ಬಾಗಿಲು ತೆರೆದಿಡಲಾಗುತ್ತಿಲ್ಲ. ಮ್ಯಾಟ್‌ಗಳ ಮೇಲೆ ಮೂತ್ರ ಮಾಡಿ, ಹೊರಗೆ ಬರದಂತಾಗಿದೆ’ ಎಂದು ಬಿಜೆಪಿಯ ಉಮಾನಾಥ ಕೋಟ್ಯಾನ್ ಹೇಳಿದರು.
ನಾಯಿಗಳ ಪರ ಹಾಗೂ ವಿರೋಧವಾಗಿ ಶಾಸಕರು ಇದ್ದಾರೆ. ಹೀಗಾಗಿ ನಿರ್ಧರಿಸಲು ಆಗುತ್ತಿಲ್ಲ ಎಂದು ಖಾದರ್ ಈ ವೇಳೆ ಹೇಳಿದರು.
ದಯವಿಟ್ಟು ವಿಧಾನಸೌಧ ಹಾಗೂ ಶಾಸಕರ ಭವನವನ್ನು ನಾಯಿಗಳಿಂದ ರಕ್ಷಿಸಿ ಎಂದು ಅಶ್ವತ್ಥನಾರಾಯಣ ಮನವಿ ಮಾಡಿದರು.
ನಾಯಿಗಳು ಶಾಸಕರ ಭವನವನ್ನು ಪ್ರವೇಶಿಸದಂತೆ ವ್ಯವಸ್ಥೆ ಮಾಡಿ. ಅವುಗಳನ್ನು ಓಡಿಸಿ ಎಂದು ಬಿಜೆಪಿಯ ಎಚ್.ಕೆ ಸುರೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.