ಬೆಂಗಳೂರು: ಉತ್ತರಹಳ್ಳಿ–ಕೆಂಗೇರಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೊದಲ್ಲಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವು ಮಾಡಿರುವ ಕ್ರಮವನ್ನು ಖಂಡಿಸಿ ವಿಷ್ಣುವರ್ಧನ್ ಅಭಿಮಾನಿಗಳು ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು. ಸಮಾಧಿ ತೆರವು ಮಾಡಿರುವ ಕ್ರಮ ಖಂಡಿಸಿ ಅಭಿಮಾನಿಗಳು ಕಣ್ಣೀರು ಹಾಕಿದರು.
ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ.
‘ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರವನ್ನು 2009ರಲ್ಲಿ ಅಭಿಮಾನ್ ಸ್ಟುಡಿಯೊದಲ್ಲಿ ನೆರವೇರಿಸಲಾಗಿತ್ತು. ಸಮಾಧಿ ಸ್ಥಳದಲ್ಲಿ ಸಣ್ಣ ಗೋಪುರ ಇತ್ತು. ಇಲ್ಲಿಯೇ ಸ್ಮಾರಕ ನಿರ್ಮಿಸಬೇಕೆಂದು ನಮ್ಮ ಸಂಘಟನೆ ಏಳು ವರ್ಷಗಳ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಸರ್ಕಾರವಾಗಲೀ, ವಿಷ್ಣುವರ್ಧನ್ ಕುಟುಂಬದವರಾಗಲೀ ಈ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಹೀಗಾಗಿ, ಆರು ತಿಂಗಳ ಹಿಂದೆ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಿತ್ತು. ಅದರ ಮೇರೆಗೆ ಬಾಲಣ್ಣ ಕುಟುಂಬದವರು ಈಗ ಸಮಾಧಿ ಗೋಪುರವನ್ನು ನೆಲಸಮಗೊಳಿಸಿದ್ದಾರೆ’ ಎಂದೂ ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
‘ಅಭಿಮಾನ್ ಸ್ಟುಡಿಯೊದಲ್ಲಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿಯ ಜಾಗವನ್ನು ಉಳಿಸಿಕೊಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೆವು. ಸಮಾಧಿ ಜಾಗವನ್ನು ಉಳಿಸಿಕೊಡುವುದಾಗಿ ಅವರು ಭರವಸೆ ನೀಡಿದ್ದರು. ಮತ್ತೊಮ್ಮೆ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಅವರನ್ನು ಭೇಟಿ ಮಾಡುವುದಿತ್ತು. ಈ ವಿಚಾರ ತಿಳಿದು ಬಾಲಣ್ಣ ಕುಟುಂಬದವರು ರಾತ್ರೋರಾತ್ರಿ ಸಮಾಧಿ ನೆಲಸಮ ಮಾಡಿದ್ದಾರೆ’ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
‘ವಿಷ್ಣು ಕುಟುಂಬದವರು ಈಗಾಗಲೇ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಿದ್ದಾರೆ. ಆದರೆ, ಅಭಿಮಾನಿಗಳೆಲ್ಲ ಸೇರಿ ಬೆಂಗಳೂರಿನಲ್ಲಿ ಬೇರೆ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಿಸಿಯೇ ನಿರ್ಮಿಸುತ್ತೇವೆ’ ಎಂದು ಹೇಳಿದರು.
‘ನಮಗೆ ಅನ್ನ ಕೊಟ್ಟ, ಉಸಿರು ನೀಡಿದ ದೇವರಗುಡಿಯನ್ನು ಇವತ್ತು ನೆಲಸಮ ಮಾಡಿದ್ದಾರೆ. ಇದು ನನ್ನ ಯಜಮಾನರು ಮಲಗಿದ್ದಂಥ ಜಾಗ. ಅಲ್ಲೊಂದು ಪುಟ್ಟ ಗುಡಿ ಇತ್ತು. ಸಣ್ಣ ಗೋಪುರವಿತ್ತು. ಆ ಗೋಪುರವನ್ನು ನೆಲಸಮ ಮಾಡಿದ್ದಾರೆ. ನಮ್ಮ ಯಜಮಾನರನ್ನು ನೋಡಲು ಬಂದರೆ ಗೇಟ್ ಕೂಡ ತೆಗೆಯುತ್ತಿಲ್ಲ. ಪೊಲೀಸರು ಸರ್ಪಗಾವಲು ಹಾಕಿಕೊಂಡು ಕುಳಿತ್ತಿದ್ದಾರೆ’ ಎಂದು ನಿರ್ದೇಶಕ ರವಿ ಶ್ರೀವತ್ಸ ಫೇಸ್‌ಬುಕ್ ಲೈವ್‌ನಲ್ಲಿ ಸಮಾಧಿ ನೆಲಸಮವಾಗಿರುವ ಜಾಗ ತೋರಿಸಿ ಅಳಲು ತೋಡಿಕೊಂಡಿದ್ದಾರೆ.
‘ದೊಡ್ಡ ನಿರ್ಮಾಪಕರು, ಅಭಿಮಾನಿಗಳೆಲ್ಲ ಎಲ್ಲಿರುವಿರಿ. ಸಮಾಧಿ ಜಾಗ ನೋಡಲು ಬಿಡದೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಅವರ ಸಮಾಧಿ ಜಾಗ ಉಳಿಸಿಕೊಳ್ಳಲಾಗದ ಅಸಮರ್ಥರು ನಾವು’ ಎಂದು ಅವರು ಹೇಳಿದ್ದಾರೆ.
ಹಿಂದೆಯೂ ನಡೆದಿತ್ತು ಪ್ರತಿಭಟನೆ: 2024ರ ಸೆಪ್ಟೆಂಬರ್ 19ರಂದು ದಿವಂಗತ ವಿಷ್ಣುವರ್ಧನ್ ಅವರ 74ನೇ ವರ್ಷದ ಜನ್ಮದಿನಾಚರಣೆ ವೇಳೆಯೂ ಅಭಿಮಾನ್ ಸ್ಟುಡಿಯೊದ ಬಳಿ ಪ್ರತಿಭಟನೆಗಳು ನಡೆದಿದ್ದವು.
ಸಮಾಧಿಯ ದರ್ಶನಕ್ಕೆ ಅವಕಾಶ ಸಿಗದೆ ಪ್ರತಿಭಟನೆ ನಡೆದು ಗದ್ದಲ ಉಂಟಾಗಿತ್ತು. ಸ್ಟುಡಿಯೊ ಹೊರಗೆ ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ವತಿಯಿಂದ ಅನ್ನದಾನ, ರಕ್ತದಾನ ಶಿಬಿರ, ಇತರೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಟುಡಿಯೊ ಹೊರಭಾಗದ ಕಾರ್ಯಕ್ರಮಕ್ಕೆ ಮಾತ್ರ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಸಮಾಧಿಗೆ ಪೂಜೆ ಸಲ್ಲಿಸದಂತೆ ಸ್ಟುಡಿಯೊದ ಸಿಬ್ಬಂದಿ ತಡೆಯೊಡ್ಡಿ ಗೇಟ್ ಬೀಗ ಹಾಕಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಅಭಿಮಾನಿಗಳು ಸ್ಮಾರಕದ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು.
ಸಮಾಧಿ ಜಾಗವನ್ನಾಷ್ಟದರೂ ನೀಡಿ
ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯಾದ ಜಾಗವಿದು. ಅವರ ಆತ್ಮ ಇಲ್ಲಿದೆ ಎಂಬ ನಂಬಿಕೆ. ಸಮಾಧಿ ಜಾಗವನ್ನು ಸರ್ಕಾರದ ನಿಗದಿತ ಬೆಲೆಗೆ ಖರೀದಿಸಲು ನಾನು ಕೇಳಿದ್ದೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು. ಈಗಲೂ ಬಾಲಣ್ಣ ಅವರ ಕುಟುಂಬದ ಬಳಿ ಸಮಾಧಿ ಜಾಗವನ್ನಾಷ್ಟದರೂ ನೀಡಿ ಎಂದು ಕೇಳಿಕೊಳ್ಳುವೆ. ಕೆ.ಮಂಜು ಸಿನಿಮಾ ನಿರ್ಮಾಪಕ ಪರಿಶೀಲಿಸಿ ಮುಂದಿನ ಹೆಜ್ಜೆ ಪ್ರಕರಣ ನ್ಯಾಯಾಲಯದಲ್ಲಿ ಇತ್ತು. ಹೀಗಾಗಿ ಈ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದಿಲ್ಲ. ವಿಷಯ ಪರಿಶೀಲಿಸಿ ಮುಂದಿನ ಹೆಜ್ಜೆ ಇಡುತ್ತೇವೆ. ಕುಟುಂಬದವರ ಆಶಯದಂತೆ ಸರ್ಕಾರವು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಸಹಕಾರ ನೀಡಿದೆ.ಎಂ.ನರಸಿಂಹಲು ಅಧ್ಯಕ್ಷ ಚಲನಚಿತ್ರ ವಾಣಿಜ್ಯ ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.