ADVERTISEMENT

ಕುವೆಂಪುಗೆ ಅವಮಾನ: ಪ್ರತಿಭಟನೆಗೆ ನಿರ್ಧಾರ

ಬೆಂಗಳೂರಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 19:32 IST
Last Updated 3 ಜೂನ್ 2022, 19:32 IST
ಬೆಂಗಳೂರಿನಲ್ಲಿ ಶುಕ್ರವಾರ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ವಕೀಲ ಸಿ.ಎಚ್‌.ಹನುಮಂತರಾಯ ಉದ್ಘಾಟಿಸಿದರು. ಜಾಣಗೆರೆ ವೆಂಕಟರಾಮಯ್ಯ, ಸಾ.ರಾ ಗೋವಿಂದು, ಸಿ.ವಿ.ದೇವರಾಜ್, ಪ್ರಕಾಶ್‌, ನಾಗರಾಜ್, ಶ್ರೀನಿವಾಸ ಜಿ. ಕಪ್ಪಣ್ಣ, ಮಹೇಶ್, ಎಲ್.ಎನ್. ಮುಕುಂದರಾಜ್, ಬಿ.ಟಿ.ಲಲಿತಾ ನಾಯಕ್, ಡಾ.ಅಂಜನಪ್ಪ ಇದ್ದರು – ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶುಕ್ರವಾರ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ವಕೀಲ ಸಿ.ಎಚ್‌.ಹನುಮಂತರಾಯ ಉದ್ಘಾಟಿಸಿದರು. ಜಾಣಗೆರೆ ವೆಂಕಟರಾಮಯ್ಯ, ಸಾ.ರಾ ಗೋವಿಂದು, ಸಿ.ವಿ.ದೇವರಾಜ್, ಪ್ರಕಾಶ್‌, ನಾಗರಾಜ್, ಶ್ರೀನಿವಾಸ ಜಿ. ಕಪ್ಪಣ್ಣ, ಮಹೇಶ್, ಎಲ್.ಎನ್. ಮುಕುಂದರಾಜ್, ಬಿ.ಟಿ.ಲಲಿತಾ ನಾಯಕ್, ಡಾ.ಅಂಜನಪ್ಪ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರಿಗೆ ಆಗಿರುವ ಅವಮಾನ ಖಂಡಿಸಿ, ‘ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ’ಯ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ವಿವಿಧ ಮಠಾಧೀಶರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಅರಮನೆ ಮೈದಾನದಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಲು ಪ್ರಮು ಖರು ತೀರ್ಮಾನಿಸಿದರು. ಸದ್ಯದಲ್ಲಿಯೇ ದಿನಾಂಕ ಘೋಷಣೆ ಮಾಡುವುದಾಗಿ ಮುಖಂಡರು ತಿಳಿಸಿದರು.

ಸಾಹಿತಿ ಎಲ್.ಎನ್‌. ಮುಕುಂದ ರಾಜ್‌ ಮಾತನಾಡಿ, ‘ಒಕ್ಕಲಿಗರ ಸಮುದಾ ಯವು ನೆಮ್ಮದಿಯಿಂದ ಇರುವುದಕ್ಕೆ ಕೆಲವು ದುಷ್ಟರು ಬಿಡುತ್ತಿಲ್ಲ. ವಿಕೃತ ಮನಸ್ಸುಗಳ ನಡೆ ಬೇಸರ ತರಿಸಿದೆ’ ಎಂದರು.
‘ಕುವೆಂಪು, ಬಸವಣ್ಣ ಕನ್ನಡ ಪ್ರವರ್ತಕರು ಮಾತ್ರವಲ್ಲದೆ ಜಗತ್ತಿನ ಪ್ರವಾದಿಗಳು. ಕುವೆಂಪು ವಿಶ್ವಮಾನವ ಧರ್ಮ ಕಟ್ಟಿದವರು. ಶಿಕ್ಷಣ ಖಾತೆಯನ್ನು ಬರೀ ಬ್ರಾಹ್ಮಣ ಸಮುದಾಯದವರಿಗೇ ನೀಡಲಾಗುತ್ತಿದೆ. ಇದರ ಹುನ್ನಾರ ಏನು? ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಲಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ವಕೀಲ ಸಿ.ಎಚ್‌.ಹನುಮಂತರಾಯ ಮಾತನಾಡಿ, ‘ಮಾನವೀಯ ಧರ್ಮದ ಅನ್ವೇಷಕ, ಸ್ಥಾಪಕ ಕುವೆಂಪು. ಅಂತಹ ಮೇರು ವ್ಯಕ್ತಿಗೆ ಅವಹೇಳನ ಮಾಡಿರುವುದಕ್ಕೆ ನನ್ನ ರಕ್ತ ಕುದಿಯುವಂತೆ ಮಾಡಿದೆ. ಅವಮಾನ ಮಾಡಿದವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.

ವಕೀಲ ಮಹೇಶ್‌ ಮಾತನಾಡಿ, ‘ಕೆಟ್ಟ ವ್ಯವಸ್ಥೆ, ಮನಸ್ಸುಗಳ ವಿರುದ್ಧ ಈ ಹೋರಾಟ. ಮನುಷ್ಯತ್ವ ಪ್ರತಿಪಾದಿಸುವ ಬ್ರಾಹ್ಮಣರು ಬೇಕಿದ್ದರೆ ಈ ರ್‍ಯಾಲಿಗೆ ಬರಲಿ. ರಾಜ್ಯದ 60 ಮಂದಿ ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗುವುದು. ಹಳೇ ಪಠ್ಯ
ಕ್ರಮವೇ ಉಳಿಯಬೇಕು. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ರೋಹಿತ್‌ ಚಕ್ರತೀರ್ಥ ಅವರನ್ನು ವಜಾಗೊಳಿಸಬೇಕು. ಸಚಿವ ಬಿ.ಸಿ.ನಾಗೇಶ್‌ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರೇ ಪ್ರತಿಭಟನೆಯ ನೇತೃತ್ವ ವಹಿಸಬೇಕು. ಸಚಿವರು ಸಮರ್ಥನೆಯ ಹೇಳಿಕೆ ನೀಡಿರುವುದು ನೋವು ತರಿಸಿದೆ. ರ್‍ಯಾಲಿಯು ಶಕ್ತಿ ಪ್ರದರ್ಶನವಾಗಿ ರೂಪುಗೊಳ್ಳಲಿ’ ಎಂದು ನಿರ್ಮಾಪಕ ಸಾ.ರಾ.ಗೋವಿಂದ್ ಹೇಳಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಆಡಿಟರ್ ನಾಗರಾಜ್‌, ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಅಂಜನಪ್ಪ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಸೇರಿ ಕುವೆಂಪು ಅಭಿಮಾನಿಗಳು ಹಾಗೂ ಸಾಹಿತಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.