ADVERTISEMENT

ನಿಖಿಲ್ ತೇಜೋವಧೆಗೆ ಯತ್ನಿಸಿದ ಆರೋಪ: ವಿಶ್ವವಾಣಿ ಸಂಪಾದಕರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 27 ಮೇ 2019, 20:00 IST
Last Updated 27 ಮೇ 2019, 20:00 IST
   

ಬೆಂಗಳೂರು: ‘ಜೆಡಿಎಸ್‌ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿ ತೇಜೋವಧೆಗೆ ಯತ್ನಿಸಿದ’ ಆರೋಪದಡಿ ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಶ್ರೀರಾಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಪಿ. ಪ್ರದೀಪ್‌ಕುಮಾರ್ ದೂರು ನೀಡಿದ್ದಾರೆ. ಅದರನ್ವಯ ವಿಶ್ವೇಶ್ವರ ಭಟ್ ಹಾಗೂ ಅವರ ಪತ್ರಿಕೆಯ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.‌

‘ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗುವುದು. ಅವರ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ADVERTISEMENT

ಮಾನಹಾನಿಗೆ ಶಿಕ್ಷೆ (ಐಪಿಸಿ 500), ಮಾನಹಾನಿಗೆ ಸಂಬಂಧಿಸಿದ ವಿಷಯಗಳ ಮುದ್ರಣ (ಐಪಿಸಿ 501), ಜೀವ ಬೆದರಿಕೆ (ಐಪಿಸಿ 506),ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504), ನಂಬಿಕೆ ದ್ರೋಹ ಹಾಗೂ ವಂಚನೆ (ಐಪಿಸಿ 406, 420), ನಕಲಿ ದಾಖಲೆ ಸೃಷ್ಟಿ(ಐಪಿಸಿ 468) ಮಾನಹಾನಿ (ಐಪಿಸಿ 499) ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ.

ದೂರಿನ ವಿವರ: ‘ಕುಡಿದ ಮತ್ತಿನಲ್ಲಿದ್ದ ನಿಖಿಲ್ ಕುಮಾಸ್ವಾಮಿ ಅವರು ತಾತ ಎಚ್‌.ಡಿ.ದೇವೇಗೌಡ ಅವರ ಜೊತೆ ಪದ್ಮನಾಭನಗರದಲ್ಲಿರುವ ಮನೆಯಲ್ಲಿಮೇ 25ರಂದು ರಂಪಾಟ ಮಾಡಿದ್ದಾರೆ. ‘ನನ್ನನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿಬಿಟ್ಟಿದ್ದೀರಿ. ಒಬ್ಬ ಮಹಿಳೆ ವಿರುದ್ಧ ಸೋತಿದ್ದು ನನಗೆ ಅವಮಾನವಾಗಿದೆ’ ಎಂದು ಕೂಗಾಡಿದ್ದಾರೆ ಎಂಬುದಾಗಿ ಉಲ್ಲೇಖಿಸಿ ‘ಗೌಡರ ಮೊಮ್ಮಕ್ಕಳ ಗದ್ದಲ ಗೊಂದಲ– ನಿಖಿಲ್ ರಾತ್ರಿ ರಂಪಾಟ’ ಎಂಬ ಶೀರ್ಷಿಕೆಯಡಿ ‘ವಿಶ್ವವಾಣಿ’ಯಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ’ ಎಂದು ದೂರಿನಲ್ಲಿ ಪ್ರದೀಪ್‌ಕುಮಾರ್ ಹೇಳಿದ್ದಾರೆ.

‘ಯಾವುದೇ ಘಟನೆ ನಡೆಯದಿದ್ದರೂ ಊಹಾಪೋಹ ಕಲ್ಪನೆಯ ರೀತಿಯಲ್ಲಿ ಘಟನೆ ನಡೆದಿರುವುದಾಗಿ ಹೇಳಿ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ಇದೊಂದು ಪೂರ್ವನಿಯೋಜಿತ ಸುದ್ದಿಯಾಗಿದೆ. ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಉದ್ದೇಶದಿಂದ ಒಳಸಂಚು ಮಾಡಿ ಅವರ ತೇಜೋವಧೆಗೆ ವಿಶ್ವೇಶ್ವರ ಭಟ್ ಹಾಗೂ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಭಯಾನಕ ಸ್ಥಿತಿ:ವಿಶ್ವೇಶ್ವರ ಭಟ್
‘19 ವರ್ಷಗಳಿಂದ ಸಂಪಾದಕನಾಗಿ ಕೆಲಸ ಮಾಡುತ್ತಿದ್ದೇನೆ. ಸುದ್ದಿ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದನ್ನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ. ರಾಜ್ಯದಲ್ಲಿ ಈಗ ಭಯಾನಕ ಸ್ಥಿತಿ ಇದೆ’ ಎಂದು ವಿಶ್ವೇಶ್ವರ ಭಟ್ ಹೇಳಿದರು.

ತಮ್ಮ ವಿರುದ್ಧ ದಾಖಲಾದ ಪ್ರಕರಣ ಸಂಬಂಧ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಯಿಂದ ಯಾರಿಗಾದರೂ ಬೇಸರವಾದರೆ ಅಥವಾ ಸುದ್ದಿ ಸುಳ್ಳಾದರೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕು. ಆದರೆ, ಇಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆಶ್ಚರ್ಯವೆಂದರೆ ದೂರು ಕೊಟ್ಟ ಒಂದೇ ಗಂಟೆಯಲ್ಲೇ ಯಾವುದೇ ಪರಿಶೀಲನೆಯನ್ನೂ ನಡೆಸದೆ ಪೊಲೀಸರು, ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ತುರ್ತು ಪರಿಸ್ಥಿತಿ ವಾತಾವರಣವಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನನ್ನ ಮೇಲೆ ನಕಲಿ ದಾಖಲೆಗಳ ಸೃಷ್ಟಿ ಹಾಗೂ ವಂಚನೆ ಆರೋಪ ಮಾಡಲಾಗಿದೆ. ಅಂಥದ್ದು ನಾನೇನು ಮಾಡಿದೆ ಎಂಬುದೇ ಗೊತ್ತಾಗುತ್ತಿಲ್ಲ. ಪೊಲೀಸರು ನನ್ನನ್ನು ಬಂಧಿಸಲಿ ಎಂದು ಕಾಯುತ್ತಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.