ಬೆಂಗಳೂರು: ‘ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಗೂ ಮೊದಲು ಮತ ಕಳವು ಪ್ರಯತ್ನ ನಡೆದಿತ್ತು. ಮೊದಲೇ ಎಚ್ಚೆತ್ತುಕೊಳ್ಳದೇ ಹೋಗಿದ್ದರೆ ನಾನು ಸೋಲುತ್ತಿದ್ದೆ. ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿ ಸಂಚು ರೂಪಿಸಿರುವ ಶಂಕೆ ಇದೆ’ ಎಂದು ಶಾಸಕ ಬಿ.ಆರ್. ಪಾಟೀಲ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಪರವಾಗಿರುವ ಅರ್ಹ 6,018 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವ ಪ್ರಯತ್ನ ನಡೆದಿತ್ತು. ನಕಲಿ ಐಡಿಗಳನ್ನು ಬಳಸಿ, ಅರ್ಹ ಮತದಾರರನ್ನು ಕೈಬಿಡಲು ಚುನಾವಣಾ ಆಯೋಗಕ್ಕೆ ಕೋರಿಕೆ ಸಲ್ಲಿಸಲಾಗಿತ್ತು. ಷಡ್ಯಂತ್ರವನ್ನು ಮನಗಂಡು ಆಯೋಗದ ಗಮನಕ್ಕೆ ತಂದೆವು. ನಾವು ನೀಡಿದ ದೂರಿನ ಆಧಾರದಲ್ಲಿ ಅಂದಿನ ಉಪ ವಿಭಾಗಾಧಿಕಾರಿ ಪ್ರಕರಣ ಕುರಿತು ಎಫ್‌ಐಆರ್ ದಾಖಲು ಮಾಡಿದ್ದರು. ಮಾಧ್ಯಮಗಳಲ್ಲಿ ವರದಿ ಪ್ರಸಾರಗೊಂಡ ನಂತರ ಎಚ್ಚೆತ್ತುಕೊಂಡ ಚುನಾವಣಾ ಆಯೋಗ ಹೆಸರುಗಳನ್ನು ಪಟ್ಟಿಯಿಂದ ಕೈಬಿಡದಂತೆ ಆದೇಶ ನೀಡಿತ್ತು. ಆದರೆ, ಮತ ಕಳವಿಗೆ ಯತ್ನಿಸಿದವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಸ್ಪಂದಿಸಲಿಲ್ಲ’ ಎಂದು ಪಾಟೀಲ ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರಕರಣವನ್ನು ಸಿಐಡಿಗೆ ವಹಿಸಿದರು. ಸಿಐಡಿ ಹಲವು ಬಾರಿ ಪತ್ರ ಬರೆದರೂ ಚುನಾವಣಾ ಆಯೋಗ ಉತ್ತರ ನೀಡಿಲ್ಲ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆರೋಪ ಮಾಡಿದ ನಂತರ ರಾಜ್ಯ ಚುನಾವಣಾಧಿಕಾರಿ ಪ್ರತಿಕ್ರಿಯೆ ನೀಡಿ, ಸಿಐಡಿಗೆ ಉತ್ತರ ನೀಡಿರುವುದಾಗಿ ಸುಳ್ಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಿಐಡಿ ಬರೆದ 18 ಪತ್ರಗಳಿಗೆ ಒಂದೂ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.
‘6,018 ಮತಗಳನ್ನು ತೆಗೆಯಲು ಮನವಿ ಮಾಡಿದ್ದ ಗುರುತಿನ ಪತ್ರ ಹೊಂದಿದವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಇಂತಹ ಷಡ್ಯಂತ್ರದ ಮೂಲಕ ಸೋಲಿಸಲು ಯೋಜನೆ ರೂಪಿಸಲಾಗಿತ್ತು. ಚುನಾವಣಾ ಆಯೋಗ ಮತದಾರರ ಹೆಸರನ್ನು ತೆಗೆದು ಹಾಕಿಲ್ಲ ಎಂದು ಈಗ ಸಮಜಾಯಿಷಿ ನೀಡುತ್ತಿದೆ. ಅದು ನಿಜ. ಸಕಾಲಕ್ಕೆ ಮಾಹಿತಿ ಸಿಗದಿದ್ದರೆ ಕಾಂಗ್ರೆಸ್ ಪರವಾಗಿರುವ ಅಷ್ಟೂ ಮತದಾರರನ್ನು ಕಳೆದುಕೊಳ್ಳಬೇಕಿತ್ತು. ಈ ಕುರಿತು ಆಂತರಿಕ ತನಿಖೆಗಾಗಿ ಸೈಬರ್ ಅಪರಾಧ ವಿಭಾಗದ ನೆರವು ಪಡೆಯಲು ಸಿಐಡಿ ಚಿಂತನೆ ನಡೆಸಿದೆ’ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೈಜಾಕ್ ಮಾಡುವ ಕೆಲಸವನ್ನು ಚುನಾವಣಾ ಆಯೋಗ ಮಾಡುತ್ತಿದೆ. ಈ ವಿಚಾರವಾಗಿ ರಾಹುಲ್ ಗಾಂಧಿ ಅವರು ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ. ದೊಡ್ಡ ಮಟ್ಟದ ದಾಖಲೆ ಶೀಘ್ರ ಬಿಡುಗಡೆ ಮಾಡಲಿದ್ದಾರೆ. ಮತ ಕಳವು ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಆಯೋಗ ಒದಗಿಸಬೇಕು ಎಂದು ಒತ್ತಾಯಿಸಿದರು.
ಹೊರ ರಾಜ್ಯದವರ ಕೈವಾಡ: ಪ್ರಿಯಾಂಕ್ ಖರ್ಗೆ
ಆಳಂದ ವಿಧಾನಸಭಾ ಚುನಾವಣೆ ವೇಳೆ ತಂತ್ರಜ್ಞಾನದ ಮೂಲಕ ಮತ ಕಳವು ಯತ್ನ ನಡೆದಿತ್ತು. ಮತದಾರರ ಪಟ್ಟಿಯಿಂದ ಹಲವರ ಹೆಸರು ಕೈಬಿಡಲು ಸಲ್ಲಿಕೆಯಾಗಿದ್ದ ಅರ್ಜಿಗಳ ಹಲವು ಮೊಬೈಲ್ ನಂಬರ್‌ಗಳು ಉತ್ತರ ಪ್ರದೇಶ ಬಿಹಾರ ಒಡಿಶಾ ಮೂಲದವು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ದೂರಿದರು. ಮತ ಕಳವಿಗೆ ಯತ್ನಿಸಿದ ಪ್ರಕರಣದಲ್ಲಿ ಹೊರ ರಾಜ್ಯದವರು ಭಾಗಿಯಾಗಿದ್ದು ಈ ಕುರಿತು ಹೆಚ್ಚಿನ ತನಿಖೆಯ ಅಗತ್ಯವಿದೆ. ಒಟಿಪಿ ಐಪಿ ವಿಳಾಸ ಸೇರಿದಂತೆ ಚುನಾವಣಾ ಆಯೋಗ ತಾಂತ್ರಿಕ ನೆರವು ನೀಡಿದರೆ ತನಿಖೆ ಸುಲಭವಾಗುತ್ತದೆ. ಆದರೆ ಆಯೋಗ ಮಾಹಿತಿ ನೀಡಿರುವುದಾಗಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.