ಬೀದರ್: ‘ಮತ ಕಳ್ಳತನದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಒಬ್ಬ ವ್ಯಕ್ತಿ–ಒಂದು ಮತ’ ಎಂಬ ಸಿದ್ಧಾಂತವನ್ನು ದುರ್ಬಲಗೊಳಿಸಿದೆ’ ಎಂದು ಸಂಸದ ಸಾಗರ ಖಂಡ್ರೆ ಅಭಿಪ್ರಾಯ ಪಟ್ಟಿದ್ದಾರೆ.
ಮತ ಕಳ್ಳತನದಿಂದ ಜನರ ಆಡಳಿತ ಹಕ್ಕುಗಳ ‘ಸರ್ಕಾರ್ ಚೋರಿ’ಯಾಗಿದೆ ಎಂದು ಗುರುವಾರ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಿಡುಗಡೆಗೊಳಿಸಿರುವ ‘ವೋಟ್ ಚೋರಿ ‘ಎಚ್’ ಫೈಲ್ಸ್’, ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಉಳಿಸಲು ಮತ್ತು ಭವಿಷ್ಯದ ಚುನಾವಣೆಗಳನ್ನು ಶುದ್ಧೀಕರಿಸಲು ಮಹತ್ವದ ಹೆಜ್ಜೆಯಾಗಿದೆ. ಈ ವರದಿ ಹರಿಯಾಣದಲ್ಲಿ ನಡೆದ ಭಾರಿ ಪ್ರಮಾಣದ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಇಡೀ ದೇಶದ ಕಣ್ಣು ತೆರೆಸಿದೆ. ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮೇಲೆ ಗಂಭೀರ ಪ್ರಶ್ನೆ ಎತ್ತಿದೆ ಎಂದಿದ್ದಾರೆ.
ನಕಲಿ ಮತದಾರರು, ನಕಲಿ ಫೋಟೋಗಳು, ಅಮಾನ್ಯ ವಿಳಾಸಗಳು, ಗುಂಪು ಮತದಾರರ ನೋಂದಣಿ, ರಾಜ್ಯಾಂತರ ಮತದಾರರ ನಕಲು ಹಾಗೂ ವಿರೋಧ ಪಕ್ಷದ ಮತದಾರರ ಹೆಸರುಗಳ ಅಳಿಕೆ ಸೇರಿದಂತೆ ಹಲವಾರು ಅಕ್ರಮಗಳು ಬಿಜೆಪಿ ಸರ್ಕಾರದ ಆಶ್ರಯದಲ್ಲಿ ನಡೆದಿವೆ ಎಂದು ಆರೋಪಿಸಿದ್ದಾರೆ.
ಈ ಅಕ್ರಮದ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ತನಿಖೆ ನಡೆಸಬೇಕು. ಮತದಾರರ ಪಟ್ಟಿಯ ಸಂಪೂರ್ಣ ಪಾರದರ್ಶಕತೆ ಮತ್ತು ಸುಧಾರಣೆಗೆ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇನೆ. ಜನತೆ ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳುವುದು ಪ್ರಜಾಸತ್ತಾತ್ಮಕ ಕರ್ತವ್ಯ. ಯುವ ಮತದಾರರು ಈ ’ವೋಟ್ ಚೋರಿ’ಯ ದೀರ್ಘಾವಧಿಯ ಪರಿಣಾಮಗಳನ್ನು ಅರಿತು, ನ್ಯಾಯಸಮ್ಮತ ಚುನಾವಣೆಗೆ ಹೋರಾಡಬೇಕು. ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ನ್ಯಾಯದ ಹಕ್ಕುಗಳು ನ್ಯಾಯಯುತ ಚುನಾವಣೆಯ ಫಲಿತಾಂಶದ ಮೇಲೆ ನಿಂತಿವೆ. ಪ್ರಜಾಸತ್ತಾತ್ಮಕ ಭಾರತವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.