ಬೆಂಗಳೂರು: ಬಿಹಾರದ ಸ್ವರೂಪದಲ್ಲೇ ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ.
ಬಿಹಾರದಲ್ಲಿ ಈಚೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ, ಸುಮಾರು 65 ಲಕ್ಷ ಜನರ ಮತದಾನದ ಚೀಟಿಯನ್ನು ರದ್ದು ಮಾಡಿ ಕರಡು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚುನಾವಣಾ ಆಯೋಗವು ಕ್ರಮ ತೆಗೆದುಕೊಂಡಿದೆ ಎಂದು ಗೊತ್ತಾಗಿದೆ.
ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮಟ್ಟದಲ್ಲಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಜಿಬಿಎ ಕಂದಾಯ ವಿಭಾಗದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಆನಂತರ ಕಂದಾಯ ವಿಭಾಗದ ಅಧಿಕಾರಿಗಳು ತಮ್ಮ ಅಧೀನ ಅಧಕಾರಿಗಳ ಸಭೆ ನಡೆಸಿದ್ದಾರೆ ಎಂದು ಖಚಿತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ನಿರ್ದೇಶನ ಬಂದಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಿಬ್ಬಂದಿಯನ್ನು ಸನ್ನದ್ಧಗೊಳಿಸಲು ತರಬೇತಿ ಸಾಮಗ್ರಿಗಳನ್ನು ಸಿದ್ಧಪಡಿಸಲಾಗಿದೆ. ತರಬೇತುದಾರರನ್ನು ಗುರುತಿಸಲಾಗಿದೆ. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಳ್ಳಲಾಗಿದೆ’ ಎಂದು ಜಿಬಿಎ ಮೂಲಗಳು ಹೇಳಿವೆ.
‘ಜಿಬಿಎಯ ಕಂದಾಯ ಅಧಿಕಾರಿಯೇ ಚುನಾವಣಾ ಕರ್ತವ್ಯದಲ್ಲಿ ಎಲೆಕ್ಟೋರಲ್ ಆಫೀಸರ್ (ಇಆರ್‌ಒ) ಆಗಿರುತ್ತಾರೆ. ಜಿಬಿಎ ವ್ಯಾಪ್ತಿಯ ಎಲ್ಲ ಇಆರ್‌ಒಗಳು ತಮ್ಮ ಅಧೀನದ ಸಹಾಯಕ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಮತ್ತು ತೆರಿಗೆ ಅಧಿಕಾರಿಗಳ ಜತೆ ಜುಲೈ ಮೂರನೇ ವಾರದಲ್ಲಿ ಸಭೆ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಬಿಹಾರದಲ್ಲಿ ನಡೆದ ಪರಿಷ್ಕರಣೆಯು ಯಶಸ್ವಿಯಾಗಿದ್ದು, ಅದನ್ನು ಕರ್ನಾಟಕದಲ್ಲೂ ಅನುಷ್ಠಾನಕ್ಕೆ ತರಲಾಗುತ್ತದೆ. ಪರಿಷ್ಕರಣೆ ಹೇಗೆ ನಡೆಯಲಿದೆ ಮತ್ತು ಯಾವ ಹಂತದ ಅಧಿಕಾರಿಯ ಹೊಣೆಗಾರಿಕೆ ಏನು ಎಂಬುದರ ಬಗ್ಗೆ ಸಭೆಯಲ್ಲಿ ಸಂಕ್ಷಿಪ್ತ ವಿವರ ನೀಡಲಾಗಿದೆ. ಜಿಬಿಎಯ ಒಂದು ವಲಯದಲ್ಲಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ತರಬೇತಿ ನಡೆಯಲಿಲ್ಲ. ಆ ಸಮಸ್ಯೆಗಳನ್ನು ಪರಿಹರಿಸಿಕೊಂಡು ಆಗಸ್ಟ್‌ನಲ್ಲಿ ಪೂರ್ಣ ಪ್ರಮಾಣದ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ’ ಎಂದು ವಿವರಿಸಿವೆ.
ಮತದಾರರ ಚೀಟಿ–ಪಟ್ಟಿ ಪರಿಷ್ಕರಣೆ, ಚುನಾವಣಾ ಕರ್ತವ್ಯದಲ್ಲಿ ಮತಗಟ್ಟೆ ಅಧಿಕಾರಿ (ಬಿಎಲ್‌ಒ) ಮಟ್ಟದ ಕರ್ತವ್ಯಗಳಿಗೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ‘ಸಿ’ ಗ್ರೂಪ್ ದರ್ಜೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿತ್ತು. ಈಗ ಕೇಂದ್ರ ಸರ್ಕಾರದ ‘ಸಿ’ ಗ್ರೂಪ್ ದರ್ಜೆಯ ಸಿಬ್ಬಂದಿಯನ್ನೂ ಬಳಸಿಕೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ.
‘ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯಿಂದ ಜಿಬಿಎಗೆ ನಿರ್ದೇಶನ ಬಂದಿದ್ದು, ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿರುವ ಕೇಂದ್ರ ಸರ್ಕಾರದ ‘ಸಿ’ ಗ್ರೂಪ್ ದರ್ಜೆಯ ಸಿಬ್ಬಂದಿಯನ್ನು ಗುರುತಿಸುವಂತೆ ಸೂಚಿಸಲಾಗಿದೆ’ ಎಂದು ಜಿಬಿಎ ಮೂಲಗಳ ಖಚಿತಪಡಿಸಿವೆ.
‘ಕೇಂದ್ರ ಸರ್ಕಾರದ ‘ಸಿ’ ಗ್ರೂಪ್ ದರ್ಜೆಯ ನೌಕರರನ್ನು ಗುರುತಿಸಿ, ಪಟ್ಟಿ ಮಾಡುವ ಹೊಣೆಗಾರಿಕೆಯನ್ನು ಕಂದಾಯ ನಿರೀಕ್ಷಕರು ಮತ್ತು ತೆರಿಗೆ ಅಧಿಕಾರಿಗಳಿಗೆ ನೀಡಲಾಗಿದೆ. ಈ ಕೆಲಸ ಇನ್ನಷ್ಟೇ ಆರಂಭವಾಗಬೇಕಿದೆ. ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ ಭಾಗವಾಗಿ ಈ ಬದಲಾವಣೆ ಮಾಡಲಾಗುತ್ತದೆಯೇ ಎಂಬುದನ್ನು ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯು ಸ್ಪಷ್ಟಪಡಿಸಿಲ್ಲ’ ಎಂದು ಮಾಹಿತಿ ನೀಡಿವೆ.
ಬಿಹಾರದಲ್ಲಿ ನಡೆಸಲಾದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ವಿರೋಧ ಪಕ್ಷಗಳು ಮತ್ತು ಸ್ವಯಂಸೇವಾ ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
‘ಒಂದು ಜಾತಿ ಸಮುದಾಯ ಮತ್ತು ಒಂದು ಧರ್ಮದ ಮತದಾರರನ್ನು ಗುರಿಯಾಗಿಸಿಕೊಂಡು ಪರಿಷ್ಕರಣೆ ನಡೆಸಲಾಗುತ್ತಿದೆ. ಆಡಳಿತ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗತ್ತಿದೆ’ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಚುನಾವಣಾ ಆಯೋಗವು ಈಚೆಗೆ ಪ್ರಕಟಿಸಿದ ಸಮಗ್ರ ಪರಿಷ್ಕರಣೆಯ ಮತದಾರರ ಪಟ್ಟಿಯಲ್ಲಿ ಸುಮಾರು 65 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಅವುಗಳಲ್ಲಿ ಅರ್ಹ ಮತದಾರರೂ ಸೇರಿದ್ದಾರೆ ಎಂದು ಆಕ್ಷೇಪ ವ್ಯಕ್ತವಾಗಿದೆ. 65 ಲಕ್ಷ ಮಂದಿಯ ಪಟ್ಟಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್, ಆಯೋಗಕ್ಕೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.