ADVERTISEMENT

ವಿಮಾನಯಾನ ಸಂಸ್ಥೆಯ ಪರವಾನಗಿಗಾಗಿ 3 ವರ್ಷ ದೆಹಲಿಗೆ ಅಲೆದಾಡಿದೆ: ಕ್ಯಾ. ಗೋಪಿನಾಥ್

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 16:04 IST
Last Updated 28 ಫೆಬ್ರುವರಿ 2025, 16:04 IST
<div class="paragraphs"><p>ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಕ್ಯಾಪ್ಟನ್&nbsp; ಜಿ.ಆರ್‌. ಗೋಪಿನಾಥ್ ಮತ್ತು ಚಿದಾನಂದ ಪಟೇಲ್ ಪಾಲ್ಗೊಂಡಿದ್ದರು</p></div>

ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಕ್ಯಾಪ್ಟನ್  ಜಿ.ಆರ್‌. ಗೋಪಿನಾಥ್ ಮತ್ತು ಚಿದಾನಂದ ಪಟೇಲ್ ಪಾಲ್ಗೊಂಡಿದ್ದರು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: 'ವಿಮಾನಯಾನ ಸಂಸ್ಥೆ ಆರಂಭಿಸುವ ಸಲುವಾಗಿ ಪರವಾನಗಿ ಪಡೆಯಲು ದೆಹಲಿಗೆ ಮೂರು ವರ್ಷ ಅಲೆದಾಡಿದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಒಂದು ರೂಪಾಯಿ ಲಂಚ ನೀಡದೆ ಪರವಾನಗಿ ಪಡೆದು ಸಂಸ್ಥೆ ಆರಂಭಿಸಿದೆ‘ ಎಂದು ಉದ್ಯಮಿ ಕ್ಯಾಪ್ಟನ್ ಗೋಪಿನಾಥ್ ಹೇಳಿದರು.

ADVERTISEMENT

ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಾಯಕತ್ವ- ಇಂದು ಮತ್ತು ನಾಳೆ’ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ಕೆಲಸವಾಗಬೇಕಾದರೆ ಲಂಚ ನೀಡಬೇಕಿತ್ತು. ಭ್ರಷ್ಟಾಚಾರ ಇರುವುದು ಸಹಜ. ಆದರೆ ಎಲ್ಲ ಅಧಿಕಾರಿಗಳು ಭ್ರಷ್ಟರಾಗಿರುವುದಿಲ್ಲ. ಗುರಿ ಮುಟ್ಟುವ ತನಕ ಪ್ರಯತ್ನ ನಿಲ್ಲಿಸಬಾರದು. ಆಗ ಮಾತ್ರ ಯಶಸ್ಸು ಸಾಧ್ಯ ’ ಎಂದು ಕಿವಿ ಮಾತು ಹೇಳಿದರು.

‘ಹಳ್ಳಿಯ ಸರ್ಕಾರಿ ಶಾಲೆ, ಬಳಿಕ ಮಿಲಿಟರಿ ಶಾಲೆಯಲ್ಲಿ ಶಿಕ್ಷಣ ಪಡೆದೆ. ನಾನು ಪೈಲಟ್ ಅಲ್ಲ. ಆದರೆ ನನ್ನ ಆತ್ಮೀಯ ಸ್ನೇಹಿತನಾಗಿದ್ದ ಪೈಲಟ್‌ಗೆ ಕೆಲಸವಿರಲಿಲ್ಲ. ಆಗಲೇ ವಿಮಾನಯಾನ ಸಂಸ್ಥೆ ಆರಂಭಿಸುವ ಬಗ್ಗೆ ಯೋಚನೆ ಬಂತು. ಕೊಲಂಬಸ್ ಸಣ್ಣ ದೋಣಿಯಲ್ಲಿ ಅಮೆರಿಕ ಕಂಡು ಹಿಡಿದ. ಹೊಸದನ್ನು ಕಂಡು ಹಿಡಿಯಬೇಕೆಂದರೆ ಊರು, ಗಡಿ, ಕಾಡು ದಾಟಿ ಹೋಗಬೇಕು. ಕನಸು, ಸಾಹಸ, ಪರಿಶ್ರಮ ಹಾಗೂ ಸತತ ಪ್ರಯತ್ನವಿದ್ದರೆ ಯಶಸ್ಸು ಸಾಧ್ಯ ಎಂಬುದಕ್ಕೇ ನಾನೇ ಸಾಕ್ಷಿ. ನಾಯಕನಾದವನಿಗೆ ಅಹಂಕಾರ ಇರಬಾರದು, ಆತ್ಮವಿಶ್ವಾಸ ಇರಬೇಕು’ ಎಂದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ತಲೆಮಾರುಗಳ ಮಧ್ಯೆ ದೊಡ್ಡ ಅಂತರವಿದೆ. ದೇಶಕ್ಕೆ ಈಗ ಯುವ ನಾಯಕತ್ವದ ಅವಶ್ಯಕತೆ ಇದೆ. ನಾಯಕನಾದವನು ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಬೇಕು. ಕೇವಲ ಭಾಷಣ, ಕಟೌಟ್‌ ಹಾಕಿಸಿಕೊಳ್ಳುವುದರಿಂದ ನಾಯಕನಾಗುವುದಿಲ್ಲ’ ಎಂದು ಹೇಳಿದರು.

‘ಚಳವಳಿಗಳಿಗೆ ದೊಡ್ಡ ಶಕ್ತಿಯೇ ಇದೆ. ಗಾಂಧೀಜಿ, ಪ್ರೊ. ನಂಜುಂಡಸ್ವಾಮಿ ಅವರಂತಹ ಹೋರಾಟಗಾರರು ಕರೆ ನೀಡಿದರೆ ಲಕ್ಷಾಂತರ ಜನರು ಸೇರುತ್ತಿದ್ದರು. ನಾಯಕನಾದವನಿಗೆ ಸಮಾಜದ ಸಮಸ್ಯೆಗಳು ಗೊತ್ತಿರಬೇಕು, ನುಡಿದಂತೆ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ನಿರುದ್ಯೋಗದ ಕಾರಣಕ್ಕೆ ಯುವಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಉದ್ಯೋಗ ನೆಚ್ಚಿಕೊಳ್ಳದೇ, ಖಾಸಗಿ ಕ್ಷೇತ್ರಗಳಲ್ಲೂ ಉದ್ಯೋಗ ಅವಕಾಶ ಬಳಸಿಕೊಳ್ಳಬೇಕು. ಸಿನಿಮಾ ಹಾಗೂ ಕ್ರಿಕೆಟ್ ತಾರೆಯರನ್ನು ನೋಡಿ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ವಾಸ್ತವ ಅರಿತು ಬದುಕು ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನ್ಯೂಸ್ 18 ಸುದ್ದಿ ವಾಹಿನಿಯ ರಾಜಕೀಯ ವಿಭಾಗದ ಮುಖ್ಯಸ್ಥ ಚಿದಾನಂದ ಪಟೇಲ್ ಸಂವಾದ ನಿರ್ವಹಿಸಿದರು. ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಹಾಜರಿದ್ದರು.

ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದಿಂದ ದೃಶ್ಯ ಮತ್ತು ಮುದ್ರಣ ಮಾಧ್ಯಮಕ್ಕೆ ಯಾವುದೇ ಅಪಾಯವಿಲ್ಲ. ಎ.ಐ ಅನ್ನು ನಿತ್ಯದ ಕೆಲಸದಲ್ಲಿ ಬಳಸಿಕೊಳ್ಳಬಹುದು.
ಹರಿಪ್ರಸಾದ್ ನ್ಯೂಸ್ 18 ಸುದ್ದಿವಾಹಿನಿ ಸಂಪಾದಕ

ಕಾರ್ಯಕ್ರಮದಲ್ಲಿ ಅವ್ಯವಸ್ಥೆ: ನಾಗತಿಹಳ್ಳಿ ಆಕ್ರೋಶ

ವೇದಿಕೆ ಒಂದರಲ್ಲಿ ಆಯೋಜಿಸಿದ್ದ ತಮ್ಮ ಸಂಪಾದಕತ್ವದ ‘ಪುಟ್ಟಿಗೊಂದು ಪುಟ್ಟಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿನ ಅವ್ಯವಸ್ಥೆಗೆ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಧ್ವನಿವರ್ಧಕದ ವ್ಯವಸ್ಥೆ ಸರಿಯಾಗಿರಲಿಲ್ಲ. ವೇದಿಕೆ 2ರಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ವೇದಿಕೆ 1ಕ್ಕೆ ಸ್ಥಳಾಂತರಿಸಲಾಯಿತು.

ಗಣ್ಯರು ಪ್ರೇಕ್ಷಕರು ಗೊಂದಲಕ್ಕೆ ಒಳಗಾದರು. ರಾಜ್ಯಸಭೆಯ ಮಾಜಿ ಸದಸ್ಯೆ ಬಿ.ಜಯಶ್ರೀ ಪುಸ್ತಕ ಬಿಡುಗಡೆ ಮಾಡಿದರು. ಅಂಕಣಗಾರ್ತಿ ದೀಪಾ ಹಿರೇಗುತ್ತಿ ಅವರು ಪುಸ್ತಕ ಕುರಿತು ಮಾತನಾಡಿದರು. ಹತ್ತು ನಿಮಿಷದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು.

ಬಳಿಕ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್ ‘ಯಾವುದೇ ಕಾರ್ಯಕ್ರಮ ಆಯೋಜನೆಗೆ ಪೂರ್ವಸಿದ್ಧತೆ ಇರಬೇಕು. ಇಲ್ಲಿ ಅವ್ಯವಸ್ಥೆ ಇದೆ. ಮುಂದಿನ ಬಾರಿ ಸಾಹಿತಿಗಳ ಸಮಿತಿ ರಚಿಸಿ ಸಲಹೆ ಪಡೆಯಬೇಕು. ಇಲ್ಲವಾದರೆ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮಕ್ಕೂ ಇದಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ’ ಎಂದರು. ‌ ‘ಮೊದಲ ಬಾರಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಲೋಪವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ’ ಎಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಕ್ಷಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.