ADVERTISEMENT

ಮನಮೋಹನ ಸಿಂಗ್ ಹೆಸರಿಟ್ಟರೆ ಸಮಸ್ಯೆ ಏನು?: ವಿಪಕ್ಷಗಳ ಟೀಕೆಗೆ ಡಿಕೆಶಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 15:51 IST
Last Updated 8 ಮಾರ್ಚ್ 2025, 15:51 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಬಿಜೆಪಿ ಸರ್ಕಾರವಿದ್ದಾಗ ರಾಜ್ಯದ ಸಂಸ್ಥೆ–ಸ್ವತ್ತುಗಳಿಗೆ ದೀನದಯಾಳ್ ಅವರ ಹೆಸರು ಇಟ್ಟಿದ್ದಾರೆ. ಆಗ ಇಲ್ಲದ ಸಮಸ್ಯೆ, ಈಗ ಮನಮೋಹನ ಸಿಂಗ್‌ ಅವರ ಹೆಸರು ಇಡುವಾಗ ಏಕೆ ಬರುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡುವಾಗ ಅವರು ಈ ಮಾತು ಹೇಳಿದರು. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಹೆಸರು ಇಡುವುದಾಗಿ  ಬಜೆಟ್‌ನಲ್ಲಿ ಘೋಷಿಸಿರುವುದಕ್ಕೆ ಟೀಕೆ ವ್ಯಕ್ತವಾಗುತ್ತಿದೆ ಎಂದು ಸುದ್ದಿಗಾರರು ಪ್ರಸ್ತಾಪಿಸಿದಾಗ, ‘ಅವರಿಗೆ ಇನ್ನಷ್ಟು ಮನ್ನಣೆ ಸಿಗಬೇಕಿದೆ’ ಎಂದರು.

‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇಲ್ಸೇತುವೆ, ಎಲೆಕ್ಟ್ರಾನಿಕ್‌ಸಿಟಿ ಮೇಲ್ಸೇತುವೆ, ನೆಲಮಂಗಲ ಮಲ್ಸೇತುವೆಗಳಿಗೆ ಅನುಮೋದನೆ ನೀಡಿದ್ದು ಮನಮೋಹನ ಸಿಂಗ್‌. ಅವರ ಹೆಸರು ಇಟ್ಟರೆ ತಪ್ಪೇನು’ ಎಂದು ಪ್ರಶ್ನಿಸಿದರು.

ADVERTISEMENT

‘ದೇಶದ ಜನರಿಗೆ ಆಹಾರ ಭದ್ರತಾ ಕಾಯ್ದೆ, ನರೇಗಾ ಯೋಜನೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು, ನಗರಾಭಿವೃದ್ಧಿ ಯೋಜನೆ, ಆಶಾ ಕಾರ್ಯಕ್ರಮ ಎಲ್ಲವನ್ನೂ ನೀಡಿದವರು ಅವರು. ತಾವು ಏನು ಮಾಡಿದ್ದೇವೆ ಎಂಬುದನ್ನು ಬಿಜೆಪಿಯವರು ರಾಜ್ಯದ ಜನರಿಗೆ ಹೇಳಲಿ’ ಎಂದರು.

ಬಜೆಟ್‌ ಕುರಿತು ವಿರೋಧ ಪಕ್ಷಗಳ ನಾಯಕರ ಟೀಕೆಯ ಬಗ್ಗೆ ಪ್ರಶ್ನಿಸಿದಾಗ, ‘ಎಲ್ಲ ರಾಜ್ಯಗಳಿಗೂ ಮಾದರಿಯಾಗುವಂತಹ ಬಜೆಟ್‌ ಅನ್ನು ಸಿದ್ದರಾಮಯ್ಯ ನೀಡಿದ್ದಾರೆ. ವಿರೋಧ ಪಕ್ಷದವರಿಗೆ ಹೇಳಲು ಏನೂ ಇಲ್ಲ. ಹೀಗಾಗಿ ಸುಳ್ಳು ಟೀಕೆ ಮಾಡುತ್ತಿದ್ದಾರೆ’ ಎಂದರು.

‘ಬೆಂಗಳೂರಿನಲ್ಲಿ ಡಬ್ಬಲ್‌ ಡೆಕ್ಕರ್‌ ಮೆಟ್ರೊ–ಮೇಲ್ಸೇತುವೆ, ರಾಜಕಾಲುವೆ ಇಕ್ಕೆಲದಲ್ಲಿ ರಸ್ತೆ, ಸುರಂಗ ಮಾರ್ಗ ನಿರ್ಮಿಸಲಿದ್ದೇವೆ. ಇದಕ್ಕಿಂತ ಇನ್ನೇನು ನೀಡಬೇಕು’ ಎಂದರು.

ಸೌಮ್ಯಾ ರೆಡ್ಡಿ
ನಿಖಿಲ್ ಕುಮಾರಸ್ವಾಮಿ
‘ಬ್ರ್ಯಾಂಡ್‌ ಬೆಂಗಳೂರು’ ಯೋಜನೆಯನ್ನು ಜಾರಿಗೆ ತಂದೇ ತರುತ್ತೇವೆ. ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾಧ್ಯವಿದ್ದುದನ್ನು ಸಿದ್ದರಾಮಯ್ಯನವರು ನಗರಕ್ಕೆ ನೀಡಿದ್ದಾರೆ
ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿ
‘ಜೆಲಾಸಿಲ್‌ ಇನೊ ಕಳಿಸುತ್ತೇವೆ’ ಸಿದ್ದರಾಮಯ್ಯ ಅವರು ಮಾದರಿ ಬಜೆಟ್‌ ಮಂಡಿಸಿದ್ದಾರೆ. ಮಹಿಳೆಯರಿಗೆ ಒಟ್ಟು ₹92000 ಕೋಟಿ ಅನುದಾನ ಒದಗಿಸಿದ್ದಾರೆ. ಇಷ್ಟು ಒಳ್ಳೆಯ ಬಜೆಟ್‌ ನೀಡಿರುವುದನ್ನು ನೋಡಿ ವಿರೋಧ ಪಕ್ಷಗಳ ನಾಯಕರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಅವರ ಈ ಸಮಸ್ಯೆ ಕಡಿಮೆ ಮಾಡಲು ಜೆಲಾಸಿಲ್ ಸಿರ‍ಪ್‌ ಮಾತ್ರೆ ಇನ್ನೂ ಎಲ್ಲವನ್ನೂ ಸಂಗ್ರಹಿಸಿದ್ದೇವೆ. ಇದನ್ನು ಅವರಿಗೆ ಕಳುಹಿಸಿ ಕೊಡುತ್ತೇವೆ. ಅವರ ಹೊಟ್ಟೆಯುರಿ ಶಮನವಾಗಲಿ. ಈ ಔಷಧಗಳು ಸಾಲದಿದ್ದರೆ ಹೇಳಲಿ ಇನ್ನಷ್ಟು ಕಳುಹಿಸುತ್ತೇವೆ.
ಸೌಮ್ಯಾ ರೆಡ್ಡಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ
‘ಮುಸ್ಲಿಮರಿಗೆ ಈದ್‌ ಕಾ ಬಿರಿಯಾನಿ’ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಮುಸ್ಲಿಮರಿಗೆ ‘ಈದ್ ಕಾ ಬಿರಿಯಾನಿ’ ನೀಡಿದ್ದಾರೆ. ಸಿಖ್ಖರು ಜೈನರು ಬೌದ್ಧ ಮತ್ತು ಕ್ರೈಸ್ತ ಧರ್ಮೀಯರಿಗೆ ನೆಕ್ಕಲು ಉಪ್ಪಿನಕಾಯಿ ನೀಡಿದ್ದಾರೆ. ಬಿರಿಯಾನಿ ತಿನ್ನುತ್ತಿರುವವರು ಮುಸಲ್ಮಾನರು ಮಾತ್ರ. 16ನೇ ಬಜೆಟ್‌ ಮಂಡಿಸಿದ್ದೇನೆ ಎಂದು ಎದೆ ತಟ್ಟಿಕೊಳ್ಳುತ್ತಾರೆ. ಮುಸ್ಲಿಮರಿಗೆ 16 ಹೊಸ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಉರ್ದು ಶಾಲೆಗಳನ್ನು ನಿರ್ಮಿಸಲು ವಕ್ಫ್‌ ಆಸ್ತಿಗಳಲ್ಲಿ ಕಟ್ಟಡ ನಿರ್ಮಿಸಲು ನೂರಾರು ಕೋಟಿ ನೀಡಿದ್ದಾರೆ. ದಲಿತರಿಗೆ ಹಿಂದುಳಿದವರಿಗೆ ಏನೂ ನೀಡಿಲ್ಲ. ಇದರಲ್ಲಿ ಸಾಮಾಜಿಕ ನ್ಯಾಯ ಎಲ್ಲಿದೆ?
ನಿಖಿಲ್‌ ಕುಮಾರಸ್ವಾಮಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.