ADVERTISEMENT

‘4 ವರ್ಷ ಎಲ್ಲಿ ಮಲಗಿದ್ದೆ ನೀನು’ ಸಿಎಂ ಹೇಳಿಕೆಗೆ ಆಕ್ಷೇಪ, ಕ್ಷಮೆಯಾಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 2:19 IST
Last Updated 19 ನವೆಂಬರ್ 2018, 2:19 IST
   

ಬೆಂಗಳೂರು:ಕಬ್ಬು ಬೆಳೆಗಾರರ ಬಾಕಿ ಪಾವತಿಸುವಂತೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಮಹಿಳಾ ಹೋರಾಟಗಾರ್ತಿ ಜಯಶ್ರೀ ಗುರಣ್ಣವರ ಅವರ ಕುರಿತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ‘ನಾಲ್ಕು ವರ್ಷಗಳ ಕಾಲ ಎಲ್ಲಿ ಮಲಗಿದ್ದೆ ನೀನು’ ಎಂದು ಕಟು ಮಾತುಗಳಲ್ಲಿ ಜರಿದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸಿಎಂ ತಕ್ಷಣ ಕ್ಷಮೆಯಾಚಿಸಬೇಕು ಎಂದು ವಿಪಕ್ಷಗಳ ಮುಖಂಡರು ಆಗ್ರಹಿಸಿದ್ದಾರೆ.

ರೈತರ ಕ್ಷಮೆ ಕೇಳಿ ದೊಡ್ಡವರೆನಿಕೊಳ್ಳಿ: ಸದಾನಂದ ಗೌಡ
'ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಒಲಿದಿರುವ ಪದವಿ ಕಾಂಗ್ರೆಸ್‌ನ ಮುಲಾಜಿನಿಂದ ಬಂದಿರಬಹುದು. ಹಾಗಂತ ನಿಮ್ಮ ಮಾತುಗಳು, ವರ್ತನೆಗಳು ಕಾಂಗ್ರೆಸ್ ಧಾಟಿಯಲ್ಲೇ ಇರಬೇಕೇ? ರೈತರ ಬಗ್ಗೆ, ರೈತ ಮಹಿಳೆಯ ಬಗ್ಗೆಗಿನ ನಿಮ್ಮ ಮಾತುಗಳು ಒಪ್ಪಲಾಗದು. ಎಲ್ಲೆ ಮೀರಿದ ನಿಮ್ಮ ಮಾತಿಗೆ ರೈತರ ಕ್ಷಮೆ ಕೇಳಿ ದೊಡ್ಡವರೆನಿಸಿಕ್ಕೊಳ್ಳಿ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಆಗ್ರಹಿಸಿದ್ದಾರೆ.

‘ನಮಗೆ ವೋಟ್ ಹಾಕಿದವರು ಮಾತ್ರ ನಮ್ಮಿಂದ ಸೌಕರ್ಯ ಪಡೆಯಬಹುದು.‌ ಹಾಕಿಲ್ಲದವರು ಏನೂ ಕೇಳಬಾರದು. ಇದು ಮುಖ್ಯಮಂತ್ರಿ ಅವರ ಮನಸ್ಥಿತಿ. ಮೂರು ಮತ್ತೊಂದು ಜಿಲ್ಲೆಯವರಿಗೆ ಮಾತ್ರ ಇವರು ಮುಖ್ಯಮಂತ್ರಿಗಳೇ? ಇದು ನಮ್ಮ ರಾಜಕೀಯ ವಿಪರ್ಯಾಸ‘ ಎಂದು ಅವರು ಟ್ವಿಟ್‌ ಮಾಡಿದ್ದಾರೆ.

ADVERTISEMENT

ಕೀಳಾಗಿ ಮಾತನಾಡುವ ಅಧಿಕಾರ ಸಿಎಂಗಿಲ್ಲ: ಸುರೇಶ್‌ ಕುಮಾರ್
‘ರೈತ, ಮಹಿಳೆ ಸೇರಿದಂತೆ ಯಾರ ಬಗ್ಗೆಯೂ ಕೀಳಾಗಿ ಮಾತನಾಡುವುದಕ್ಕೆ ಮಖ್ಯಮಂತ್ರಿಗಳಿಗೆ ಅಧಿಕಾರವಿಲ್ಲ’ ಎಂದು ಶಾಸಕ ಎಸ್‌. ಸುರೇಶ್‌ ಕುಮಾರ್‌ ಎಚ್ಚರಿಸಿದ್ದಾರೆ.

‘ನಾವು ಸಾಯೋವರೆಗೂ ಕಬ್ಬನ್ನೇ ಬೆಳೆಯೋದು. ಇವರು ಕುಟುಂಬದವರನ್ನೇ ಬೆಳೆಸೋದು’. ‘...ಮುಖ್ಯಮಂತ್ರಿಗಳಿಂದ ‘ಗೂಂಡಾಗಳು’ ಎಂದು ಅನಿಸಿಕೊಂಡ‌ ನಂತರದ ಕರ್ನಾಟಕದ ಕಬ್ಬು ಬೆಳೆಗಾರರೊಬ್ಬರ ನೊಂದ ಮಾತಿದು’ ಎಂದು ಅವರು ಮತ್ತೊಂದು ಟ್ವಿಟ್‌ ಮಾಡಿದ್ದಾರೆ.‌

ಸಿಎಂ ಆಡಿದ ಮಾತು
‘ಆಡಳಿತ ನಡೆಸಲು ಕುಮಾರಸ್ವಾಮಿ ನಾಲಾಯಕ್‌ ಎಂದು ಮಹಿಳೆಯೊಬ್ಬಳು ನನ್ನನ್ನು ನಿಂದಿಸಿದ್ದಾಳೆ. ನಾಲ್ಕೂವರೆ ವರ್ಷಗಳ ಹಿಂದೆ ಯಾವುದೋ ಕಂಪನಿಯವರು ಕಬ್ಬಿಗೆ ಸರಿಯಾದ ದರ ನೀಡಿಲ್ಲ ಎಂಬ ಕಾರಣಕ್ಕೆ ನಾನು ಹೇಗೆ ನಾಲಾಯಕ್‌ ಆಗುತ್ತೇನೆ? ಇದಕ್ಕೂ ನನಗೂ ಏನು ಸಂಬಂಧ? ನಾಲ್ಕು ವರ್ಷಗಳ ಕಾಲ ಎಲ್ಲಿ ಮಲಗಿದ್ದೆ ನೀನು’ ಎಂದು ಕುಮಾರಸ್ವಾಮಿ ಅವರು ರೈತ ಹೋರಾಟಗಾರ್ತಿ ಜಯಶ್ರೀ ಗುರಣ್ಣವರ ಅವರನ್ನು ಕಟು ಮಾತುಗಳಲ್ಲಿ ಭಾನುವಾರ ಜರಿದಿದ್ದರು.

ಇಂಥ ಮಾತು ನಿರೀಕ್ಷಿಸಿರಲಿಲ್ಲ
‘ಗೇಟಿಗೆ ಬೀಗ ಹಾಕಲು ಬಂದ ಪೊಲೀಸರು, ನನ್ನ ಕೊರಳಿಗೆ ಸರಪಳಿ ಹಾಕಿದ್ದಾರೆ. ನಾನು ರೈತ ಮಹಿಳೆ. ರಕ್ತ ಬೇಕಾದರೂ ಕೊಡುತ್ತೇನೆ. ಮುಖ್ಯಮಂತ್ರಿ ಮಾತು ತಪ್ಪಿದ್ದಾರೆ’ ಎಂದು ಜಯಶ್ರೀ ಆಕ್ರೋಶ ವ್ಯಕ್ತಪಡಿಸಿದರು.

‘ನನಗೆ ತಾಯಿ ಹಾಗೂ ಪತಿಯ ಮನೆ ಎರಡು ಕಡೆಗಳಲ್ಲೂ ಜಮೀನಿದೆ. ನಾನೂ ಜಮೀನಿನಲ್ಲಿ ಕೆಲಸ ಮಾಡುತ್ತೇನೆ. ಕಬ್ಬು ಬೆಳೆಗಾರರ ‍ಪರವಾಗಿ ದನಿ ಎತ್ತಿರುವ ನನ್ನನ್ನು ಅವಮಾನಿಸಿದ್ದಾರೆ' ಎಂದಿದ್ದರು.

ಕುಮಾರಸ್ವಾಮಿ ಅವರು ರಾಜ್ಯದ ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ‍ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.