ADVERTISEMENT

ಲಸಿಕೆ ಪಡೆಯುವಲ್ಲಿ ಮಹಿಳೆಯರ ಮೇಲುಗೈ:ಸಚಿವ ಸುಧಾಕರ್

ಕೊರೊನಾ ಲಸಿಕಾ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 21:27 IST
Last Updated 11 ಏಪ್ರಿಲ್ 2021, 21:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ 61 ಲಕ್ಷ ಕೋವಿಡ್ ಲಸಿಕೆ ನೀಡಲಾಗಿದ್ದು, ಈ ಪೈಕಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯು ಶಿವಾಜಿನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಲಸಿಕಾ ಮಹೋತ್ಸವ’ದಲ್ಲಿ ಅವರು ಮಾತನಾಡಿದರು.

‘ರಾಜ್ಯಕ್ಕೆ 72 ಲಕ್ಷಕ್ಕೂ ಹೆಚ್ಚು ಲಸಿಕೆ ಬಂದಿದೆ. ಇದರಲ್ಲಿ 61 ಲಕ್ಷ ಕೋವಿಡ್ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದವರಲ್ಲಿ ಶೇ 53ರಷ್ಟು ಮಹಿಳೆಯರೇ ಇದ್ದಾರೆ. ಈ ಶತಮಾನದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ’ ಎಂದರು.

ADVERTISEMENT

‘ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಶೈಕ್ಷಣಿಕ ಅಸಮಾನತೆ ನಿವಾರಿಸಲು ಶ್ರಮಿಸಿದ ಜ್ಯೋತಿಬಾಫುಲೆ ಅವರ ಜನ್ಮದಿನ ಹಾಗೂ ಸಮಾನತೆ, ಸ್ವಾತಂತ್ರ್ಯಕ್ಕೆ ಹೋರಾಡಿದ ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಲಸಿಕಾ ಮಹೋತ್ಸವ ಆಚರಿಸಲಾಗುತ್ತಿದೆ’

‘ಲಸಿಕೆ ವಿಚಾರದಲ್ಲಿ ರಾಜಕೀಯ, ಧರ್ಮ, ಭಾಷೆ ಬೆರೆಸುವ ಕೆಲಸ ಮಾಡಬಾರದು. ಸಾಂಕೇತಿಕವಾಗಿ ಎಲ್ಲ ಧರ್ಮದ ಮಹಿಳೆಯರಿಗೆ ಲಸಿಕೆ ನೀಡುವ ಮೂಲಕ ವಿಶೇಷ ಲಸಿಕೋತ್ಸವಕ್ಕೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

ಲಸಿಕಾ ಮಹೋತ್ಸವದಲ್ಲಿ ಮಹಿಳೆಯರಿಗೆ ಲಸಿಕೆ ಹಾಕಲಾಯಿತು.ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್, ಆರೋಗ್ಯ ಇಲಾಖೆ ನಿರ್ದೇಶಕ ಡಾ.ಓಂಪ್ರಕಾಶ್ ಪಾಟೀಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.