ADVERTISEMENT

‘ಯಶಸ್ವಿನಿ’ ಚಿಕಿತ್ಸಾ ವೆಚ್ಚ ಶೇ 55 ಹೆಚ್ಚಳ: ಶಿಫಾರಸು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 16:33 IST
Last Updated 22 ಏಪ್ರಿಲ್ 2025, 16:33 IST
   

ಬೆಂಗಳೂರು: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಲ್ಲಿ ಸದಸ್ಯರಿಗೆ ನೀಡುತ್ತಿರುವ ಶಸ್ತ್ರಚಿಕಿತ್ಸೆಗಳ ದರಗಳನ್ನು ಶೇ 55ರಷ್ಟು ಹೆಚ್ಚಳ ಮಾಡಲು ಶಾಸಕ ಡಾ.ಎನ್‌.ಟಿ. ಶ್ರೀನಿವಾಸ ಅವರ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದೆ.

ಪರಿಷ್ಕರಣೆ ಕುರಿತು ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಸಲ್ಲಿಸಿದ್ದು, ಚಿಕಿತ್ಸಾ ವೆಚ್ಚ ಹೆಚ್ಚಳದ ಪ್ರಸ್ತಾಪದಿಂದಾಗಿ ಸರ್ಕಾರಕ್ಕೆ ₹68.75 ಕೋಟಿ ಹೆಚ್ಚಿನ ಹೊರೆ ಬೀಳಲಿದೆ. 

ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು 2022-23ರಿಂದ ಮರುಜಾರಿಗೊಳಿಸಲಾಗಿತ್ತು. ಆದರೆ, 2017-18 ಅವಧಿಯಲ್ಲಿ ನಿಗದಿ ಮಾಡಿದ ಚಿಕಿತ್ಸಾ ದರಗಳೇ ಆಗಿದ್ದವು. ಪ್ರಸ್ತುತ ಮಾರುಕಟ್ಟೆ ದರಗಳಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಇರುವ ಕಾರಣ ಪ್ರಮುಖ ಆಸ್ಪತ್ರೆಗಳು ಯೋಜನೆಯಡಿ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದವು. ಹಾಗಾಗಿ, ದರ ಪರಿಷ್ಕರಣೆ ಮಾಡಲು ಸಮಿತಿ ರಚಿಸಲಾಗಿತ್ತು. ಸಮಿತಿ ಶೇ 50ರಿಂದ 55ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. 

ADVERTISEMENT

ಈಗಿನ ಯಶಸ್ವಿನಿ ಯೋಜನೆಯಲ್ಲಿ 2,128 ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಪ್ರಸ್ತುತ ಇರುವ ಚಿಕಿತ್ಸೆಗಳಲ್ಲಿ 6 ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಕೈಬಿಡಲಾಗಿದೆ. ಅದೇ ರೀತಿ ವೈದ್ಯಕೀಯ ಕ್ಷೇತ್ರದಲ್ಲಿ ಹೊಸದಾಗಿ ರೇಡಿಯಾಲಜಿ, ಸಿಟಿವಿಎಸ್‌, ಕ್ಯಾನ್ಸರ್ ಕಾಯಿಲೆ ಸೇರಿ 69 ಹೊಸ ಚಿಕಿತ್ಸೆಗಳನ್ನು ಸೇರಿಸಲಾಗಿದೆ. ಒಟ್ಟು 2,191 ಚಿಕಿತ್ಸೆಗಳನ್ನು ನಿಗದಿಗೊಳಿಸಲಾಗಿದೆ. 

ಯಶಸ್ವಿನಿ ಯೋಜನೆಯಡಿ 2024-25ರಲ್ಲಿ 68,159 ಫಲಾನುಭವಿಗಳು ₹117.79 ಕೋಟಿ ಮೊತ್ತದ ಚಿಕಿತ್ಸೆಯನ್ನು ಪಡೆದಿದ್ದು ಸರಾಸರಿ ಒಂದು ಚಿಕಿತ್ಸಾ ವೆಚ್ಚ ₹17 ಸಾವಿರ ಆಗಿದೆ. 2025–26ನೇ ಸಾಲಿನಲ್ಲಿ 75 ಸಾವಿರ ಫಲಾನುಭವಿಗಳು ಚಿಕಿತ್ಸೆ ಪಡೆಯುವ ಅಂದಾಜು ಇದ್ದು, ₹127.50 ಕೋಟಿ ವೆಚ್ಚ ನಿಗದಿ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.