ADVERTISEMENT

ಎತ್ತಿನ ಹೊಳೆ: 2027 ಅಕ್ಟೋಬರ್‌ಗೆ ಪೂರ್ಣ: ಡಿ.ಕೆ. ಶಿವಕುಮಾರ್ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 18:11 IST
Last Updated 15 ಡಿಸೆಂಬರ್ 2025, 18:11 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

ಸುವರ್ಣ ವಿಧಾನಸೌಧ(ಬೆಳಗಾವಿ): ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2027ರ ಅಕ್ಟೋಬರ್‌ ವೇಳೆಗೆ ಪೂರ್ಣಗೊಳಿಸುವುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ. 

ವಿಧಾನಸಭೆಯಲ್ಲಿ ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಈ ಮಾಹಿತಿ ನೀಡಿದ್ದಾರೆ.

ADVERTISEMENT

ಈಗಾಗಲೇ ಮೀಸಲಿರಿಸಿರುವ ಅನುದಾನದಲ್ಲಿ ಯೋಜನೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಬಯಲುಸೀಮೆ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲಾಗುವುದು. ಈ ಯೋಜನೆಯಡಿ ಕೋಲಾರ ಗುರುತ್ವ ಪೈಪ್‌ಲೈನ್‌ ಪ್ಯಾಕೇಜ್‌ 3 ಮತ್ತು 4, ಕೋಲಾರ ಫೀಡರ್‌ ಪೈಪ್‌ಲೈನ್‌ ಪ್ಯಾಕೇಜ್‌ 5 ಮತ್ತು 6 ಹಾಗೂ ಶ್ರೀನಿವಾಸಪುರ ಫೀಡರ್‌ ಪೈಪ್‌ಲೈನ್‌ ಪ್ಯಾಕೇಜ್‌ 1 ರಿಂದ 3ರ ಕಾಮಗಾರಿಗಳನ್ನು ಆರಂಭಿಸಲು ಕಳೆದ ಮೇ 16ರಂದೇ ಅನುಮೋದನೆ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಪ್ರಸ್ತುತ ಕಾಮಗಾರಿಗಳ ಪೈಪ್‌ಲೈನ್‌ ಅಲೈನ್‌ಮೆಂಟ್‌, ವಿನ್ಯಾಸ, ನಕ್ಷೆಗಳ ತಯಾರಿಕೆ ಕಾರ್ಯ ಪೂರ್ಣಗೊಂಡಿದೆ. ಗುಣಮಟ್ಟ ಖಾತರಿ ಯೋಜನೆ ಕೂಡ ಅನುಮೋದನೆ ಹಂತದಲ್ಲಿದೆ. ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಗುತ್ತಿಗೆ ಕರಾರಿನ ಅನ್ವಯ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ ಎಂದು ಶಿವಕುಮಾರ್‌ ಹೇಳಿದ್ದಾರೆ.

ರೈತರೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದು, ಈ ಎಲ್ಲ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.