ADVERTISEMENT

ಯೋಗೀಶಗೌಡ ಗೌಡರ ಕೊಲೆ ಪ್ರಕರಣ: ವಿನಯ ಕುಲಕರ್ಣಿ ಸಿಬಿಐ ವಶಕ್ಕೆ

ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 15:46 IST
Last Updated 6 ನವೆಂಬರ್ 2020, 15:46 IST
   

ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವವಿನಯ ಕುಲಕರ್ಣಿ ಅವರನ್ನು ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ಮೂರು ದಿನ ಸಿಬಿಐ ವಶಕ್ಕೆ ನೀಡಿತು.

‘ಕೊಲೆಯಲ್ಲಿ ಆರೋಪಿಯ ಕೈವಾಡ ಇರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಆರೋಪಿಯನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಹಲವು ಹೇಳಿಕೆಗಳ ಕುರಿತು ಅವರಿಂದ ವಿವರಣೆ ಪಡೆಯಬೇಕಾಗಿದೆ. ಹೀಗಾಗಿ ಸಿಬಿಐ ವಶಕ್ಕೆ ನೀಡಬೇಕು’ ಎಂದು ಸಿಬಿಐ ಪರ ವಕೀಲ ಸುದರ್ಶನ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿ ಪರ ವಕೀಲ ಬಾಹುಬಲಿ ದಾಂಡೇವಾಲೆ, ‘ನಾಲ್ಕು ವರ್ಷಗಳಷ್ಟು ಹಳೆಯ ಪ್ರಕರಣದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಎಫ್‌ಐಆರ್‌ ಹಾಗೂ ದೋಷಾರೋಪಪಟ್ಟಿಯಲ್ಲಿ ವಿನಯ ಕುಲಕರ್ಣಿ ಅವರ ಹೆಸರಿಲ್ಲ. ನಿರೀಕ್ಷಣಾ ಜಾಮೀನು ಪಡೆಯಲು ಸಹ ಅವರು ಅರ್ಜಿ ಸಲ್ಲಿಸಿಲ್ಲ. ಗುರುವಾರ ವಶಕ್ಕೆ ಪಡೆದ ನಂತರ ಸಿಬಿಐ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ’ ಎಂದರು.

ADVERTISEMENT

‘ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿರುವ ವಿನಯ ಅವರು ಯಾವುದೇ ಕಾರಣಕ್ಕೂ ತನಿಖೆಯಿಂದ ತಪ್ಪಿಸಿಕೊಳ್ಳುವ ಜಾಯಮಾನದವರಲ್ಲ. ಅಲ್ಲದೇ ನ್ಯಾಯಾಂಗ ಬಂಧನದಲ್ಲಿದ್ದರೂ ಸಿಬಿಐ ಅಧಿಕಾರಿಗಳಿಗೆ ಆರೋಪಿಯನ್ನು ವಿಚಾರಣೆ ನಡೆಸಲು ಯಾವುದೇ ತೊಂದರೆ ಇಲ್ಲ. ಹೀಗಾಗಿ ಸಿಬಿಐ ವಶಕ್ಕೆ ನೀಡಬಾರದು, ನೀಡುವ ಅಗತ್ಯ ಕೂಡ ಇಲ್ಲ’ ಎಂದು ಮನವಿ ಮಾಡಿದರು.

ವಾದ– ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಎಂ.ಪಂಚಾಕ್ಷರಿ ಅವರು ಅಂತಿಮವಾಗಿ ಸಂಜೆ 5.30ಕ್ಕೆ ಆದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.