ADVERTISEMENT

ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಅಜಯ್‌ ಮಿಶ್ರಾ ತಕ್ಷಣ ರಾಜೀನಾಮೆ ನೀಡಲಿ– ಡಿಕೆಶಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 9:45 IST
Last Updated 4 ಅಕ್ಟೋಬರ್ 2021, 9:45 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ನೈತಿಕ ಹೊಣೆ ಹೊತ್ತು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಅನ್ನದಾತ ತನ್ನ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾನೆ. ಕೇಂದ್ರ ಸಚಿವ ಮಿಶ್ರಾ ಅವರ ಬೆಂಗಾವಲು ಕಾರು ಹರಿಸಿ ನಾಲ್ವರನ್ನು ರೈತರನ್ನು ಕೊಲೆ ಮಾಡಲಾಗಿದೆ. ಈ ದೇಶ ಯಾವ ಕಡೆ ಹೋಗುತ್ತಿದೆ ಎಂಬ ಆತಂಕ ಆಗುತ್ತಿದೆ. ತಕ್ಷಣ ಅವರಿಬ್ಬರೂ ರಾಜೀನಾಮೆ ಕೊಟ್ಟು, ಕ್ಷಮೆ ಕೇಳಬೇಕಿತ್ತು’ ಎಂದರು.

‘ಇದು ಕೇವಲ ನಾಲ್ವರು ರೈತರ ಕೊಲೆ ಅಲ್ಲ. ಇಡೀ ದೇಶದ ರೈತರ ಕೊಲೆ. ಪ್ರಜಾಪ್ರಭುತ್ವದ ಕೊಲೆ. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಭಾನುವಾರ ಮಧ್ಯರಾತ್ರಿ ಆ ಸ್ಥಳಕ್ಕೆ ಹೋಗುವಾಗ ಪೊಲೀಸರು ಅವರನ್ನು ಎಳೆದಾಡಿ, ತಡೆದಿದ್ದಾರೆ. ಯಾವ ದೇಶದಲ್ಲಿ ನಾವಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಇಡೀ ದೇಶದಲ್ಲಿ ರೈತ ಸಿಡಿದೆದ್ದಿದ್ದಾನೆ. ಇಂಥ ರೈತರ ಸಾವಾದಾಗ ಅಲ್ಲಿಗೆ ಹೋಗಲು ಮುಂದಾದ ಪ್ರಿಯಾಂಕಾ ಗಾಂಧಿಯವರನ್ನು ಪೊಲೀಸರು ಎಳೆದಾಡಿದ್ದಾರೆ. ಇಡೀ ದೇಶ ಪ್ರಿಯಾಂಕಾ ಅವರ ಗಾಂಧಿ ಬೆನ್ನ ಹಿಂದಿದೆ. ಸತ್ತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಪ್ರಿಯಾಂಕಾ ಮುಂದಾಗಿದ್ದರು. ಸಾಂತ್ವನ ಹೇಳುವುದು ನಮ್ಮ ಸಂಸ್ಕೃತಿ. ಎಳೆದಾಡಿ ತಡೆಯುವುದು ಬಿಜೆಪಿ ಸಂಸ್ಕೃತಿ. ಸರ್ವಾಧಿಕಾರಿ ಆಡಳಿತ ದೇಶದಲ್ಲಿ ನಡೆಯುತ್ತಿದೆ. ಹಿಟ್ಲರ್ ಮಾದರಿಯ ಆಡಳಿತ ನಡೆಯುತ್ತಿದೆ. ರಾಮ ರಾಜ್ಯ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದವರು ರಾವಣ ರಾಜ್ಯ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ದೇಶದ ಅನ್ನದಾತನ ಶಾಂತಿಯುತ ಪ್ರತಿಭಟನೆ ಸಹಿಸಲಿಲ್ಲ. ಅನ್ನದಾತರನ್ನು ಒಬ್ಬ ಕೇಂದ್ರ ಸಚಿವನೂ ಭೇಟಿ ಮಾಡಲಿಲ್ಲ. ಬಿಜೆಪಿ ಸರ್ಕಾರ ರೈತರ ಮಾತುಕತೆಗೂ ಕರೆಯದೇ ಇಂಥ ಕೃತ್ಯ ನಡೆಸಿರುವುದು ಖಂಡನೀಯ. ಆಡಳಿತದಲ್ಲಿ ಬಿಜೆಪಿಯವರು ಬ್ರಿಟಿಷರಿಗಿಂತ ಮೇಲು. ಬ್ರಿಟಿಷರಾದರೂ ಕಡೆಗೆ ತಲೆಬಾಗಿ ಓಡಿ ಹೋದರು. ಆದರೆ, ಈ ಬಿಜೆಪಿಯ ವಿರುದ್ಧ ಜನರೇ ದಂಗೆ ಏಳಬೇಕಾಗಿದೆ. ಪ್ರಿಯಾಂಕಾ ಗಾಂಧಿಯವರೇ ಇಡೀ ದೇಶದ ಜನ ನಿಮ್ಮ ಹಿಂದೆ ಇದ್ದಾರೆ. ನೀವು ಮುನ್ನುಗ್ಗಿ, ನಿಮ್ಮ ಬೆನ್ನ ಹಿಂದೆ ನಾವು ಇದ್ದೇವೆ. ದೇಶದ ಜನರೇ ಬಿಜೆಪಿಗೆ ಪಾಠ ಕಲಿಸುತ್ತಾರೆ’ ಎಂದರು.

ಬೊಮ್ಮಾಯಿ‌ಗೆ ಗಡುವು: ‘ಮೇಕೆದಾಟು ಯೋಜನೆಗೆ ಅಡ್ಡಿಪಡಿಸಲು ತಮಿಳುನಾಡಿಗೆ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಆದರೆ, ಇದುವರೆಗೂ ಕೃಷ್ಣಾ, ಮಹದಾಯಿ ಸೇರಿದಂತೆ ಯಾವುದೇ ಕೆಲಸವನ್ನು ಅವರು ಆರಂಭ ಮಾಡಿಲ್ಲ. ಮೇಕೆದಾಟು ಯೋಜನೆಗೆ ತಮಿಳುನಾಡು‌ ಅಡ್ಡಿಪಡಿಸಲು‌ ಆಗಲ್ಲ ಎಂದಾದರೆ, ಮೇಕೆದಾಟು ಯೋಜನೆಯನ್ನು ಯಾಕೆ ಆರಂಭ ಮಾಡುತ್ತಿಲ್ಲ. ತಮಿಳುನಾಡಿನ ಜೊತೆ ಹೊಂದಾಣಿಕೆ ಇದೆಯಾ, ಒಪ್ಪಂದ ಇದೆಯಾ‌’ ಎಂದು ಪ್ರಶ್ನಿಸಿದರು.

‘ಮೇಕೆದಾಟು ಯೋಜನೆ ಆರಂಭಿಸಲು ಬೊಮ್ಮಾಯಿಗೆ ಒಂದು ತಿಂಗಳ ಗಡುವು ಕೊಡುತ್ತಿದ್ದೇನೆ. ಇನ್ನೊಂದು ತಿಂಗಳ ಒಳಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕಬೇಕು. ಬೊಮ್ಮಾಯಿಗೆ ನೀರಾವರಿ ಯೋಜನೆಗಳ ಬಗ್ಗೆ ಯಾವುದೇ ರೀತಿಯ ಬದ್ಧತೆ ಇಲ್ಲ. ಒಂದು ತಿಂಗಳ ಗಡುವು ಮುಗಿದ ಮೇಲೆ ಏನು ಎಂದು ಈಗಲೇ ಹೇಳಲ್ಲ’ ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಸಲೀಂ ಅಹ್ಮದ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.