ADVERTISEMENT

ಜಾಂಬೂರಿಯ ನೆನಪಿನಾರ್ಥ ಪಿಲಿಕುಳದಲ್ಲಿ ಯುವಶಕ್ತಿ ಕೇಂದ್ರ: ಮೋಹನ ಆಳ್ವ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 0:15 IST
Last Updated 27 ಡಿಸೆಂಬರ್ 2022, 0:15 IST
   

ಮೂಡುಬಿದಿರೆ: ‘ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ನೆನಪನ್ನು ಚಿರಸ್ಥಾಯಿಗೊಳಿಸಲು ಪಿಲಿಕುಳದಲ್ಲಿ ಒಂದು ವರ್ಷದೊಳಗೆ ಯುವಶಕ್ತಿ ಕೇಂದ್ರವನ್ನು ಸ್ಥಾಪಿಸಲಿದ್ದೇವೆ’ ಎಂದು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ.ಮೋಹನ ಆಳ್ವ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಇಲ್ಲಿ ಮಾತನಾಡಿದ ಅವರು, ‘ಪಿಲಿಕುಳದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ 15 ಎಕರೆ ಜಾಗ ಮಂಜೂರಾಗಿದೆ. ಇಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜೊತೆಗೆ ಎನ್‌ಸಿಸಿ, ಎನ್ಎಸ್ಎಸ್ ಚಟುವಟಿಕೆಗೆ, ಪೊಲೀಸ್ ಮತ್ತಿತರ ಇಲಾಖೆಗಳ ತರಬೇತಿ ಶಿಬಿರಗಳನ್ನು ನಡೆಸಲು ಕನಿಷ್ಠ 1 ಸಾವಿರ ಮಂದಿಗೆ ವಸತಿಯುಕ್ತ ವ್ಯವಸ್ಥೆ ಇರುವಕಟ್ಟಡ ನಿರ್ಮಿಸುವ ಉದ್ದೇಶವಿದೆ. ದಾನಿಗಳು ಕೈಜೋಡಿಸಿದರೆ ದೊಡ್ಡ ಮಟ್ಟದ ಯೋಜನೆ ಹಮ್ಮಿಕೊಳ್ಳುತ್ತೇವೆ. ಇಲ್ಲದಿದ್ದರೆ ಸಣ್ಣ ಮಟ್ಟದಲ್ಲಾದರೂ ಯುವಶಕ್ತಿ ಕೇಂದ್ರವನ್ನು ಸ್ಥಾಪಿಸಲಿದ್ದೇವೆ’ ಎಂದರು.

‘ಉಡುಪಿಯಲ್ಲಿ 15 ಎಕರೆ, ಬೆಳ್ತಂಗಡಿಯಲ್ಲಿ 3 ಎಕರೆ ಜಾಗ ಇದೆ. ಇಲ್ಲಿ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳನ್ನು ನಡೆಸಲು ಪೂರಕ ವ್ಯವಸ್ಥೆ ಮಾಡಬೇಕಾಗಿದೆ’ ಎಂದರು.

ADVERTISEMENT

‘ರಾಜ್ಯದ ಎಲ್ಲ ಜಿಲ್ಲೆಗಳ ಸ್ಕೌಟ್ಸ್ ಗೈಡ್ಸ್ ಮುಖ್ಯಸ್ಥರನ್ನು ಮೂಡುಬಿದಿರೆಗೆ ಶೀಘ್ರವೇ ಆಹ್ವಾನಿಸಿ, ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ನೇತೃತ್ವದಲ್ಲಿ ಸಭೆ ನಡೆಸಲಿದ್ದೇವೆ. ಸ್ಕೌಟ್ಸ್ ಮತ್ತು ಗೈಡ್ಸ್‌ ಅನ್ನು ಜನಪ್ರಿಯಗೊಳಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಿದ್ದೇವೆ. ಅದನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಜೊತೆಗೆ ಸಾರ್ವಜನಿಕರೊಂದಿಗೂ ಹಂಚಿಕೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.

‘ಪೂರ್ವ ತಯಾರಿಗೆ ಕೇವಲ ಮೂರು ತಿಂಗಳು ಕಾಲಾವಕಾಶ ಸಿಕ್ಕಿದ್ದರಿಂದ ವಿದೇಶಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಈ ಜಾಂಬೂರಿಯಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ‘ ಎಂದು ಅವರು ಪ್ರಶ್ನೆಯೊಂದಕ್ಕೆ ತಿಳಿಸಿದರು.

‘ಸರ್ಕಾರದಿಂದ ಇನ್ನಷ್ಟು ನೆರವು ನಿರೀಕ್ಷೆ’

‘ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ 63 ಸಾವಿರಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡ ಈ ಜಾಂಬೂರಿಗೆ ಸುಮಾರು ₹40 ಕೋಟಿ ವೆಚ್ಚವಾಗಿದೆ. ರಾಜ್ಯ ಸರ್ಕಾರ ₹ 10 ಕೋಟಿಬಿಡುಗಡೆ ಮಾಡಿದೆ.ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನಷ್ಟು ಆರ್ಥಿಕ ನೆರವು ನೀಡುತ್ತಾರೆ ಎಂಬ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು ಹಾಗೂ ಸ್ಥಳೀಯ ಶಾಸಕರಿಗೂ ಜವಾಬ್ದಾರಿ ಇದೆ’ ಎಂದು ಮೋಹನ ಆಳ್ವ ತಿಳಿಸಿದರು.

‘ಸ್ಕೌಟ್ಸ್, ಗೈಡ್ಸ್ ಸಂಖ್ಯೆ ಇಮ್ಮಡಿಯಾಗಲಿ’

‘ಯಾವುದೇ ಜಾಂಬೂರಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಆದರೆ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಮಹತ್ವ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಯಬೇಕು ಎಂಬ ಕಾರಣಕ್ಕೆ ಈ ಜಾಂಬೂರಿಯಲ್ಲಿ ಸಾರ್ವಜನಿಕರಿಗೂ ಮುಕ್ತ ಪ್ರವೇಶ ನೀಡಿದ್ದೇವೆ. ಇದರಿಂದ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗೆ ಅಡ್ಡಿಯಾಗದಂತೆಯೂಎಚ್ಚರ ವಹಿಸಿದ್ದೇವೆ. ರಾಜ್ಯದಲ್ಲಿ 6 ಲಕ್ಷ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿದ್ದಾರೆ. ಈ ಸಂಖ್ಯೆ ಇಮ್ಮಡಿ ಆಗಬೇಕೆಂಬುದು ನಮ್ಮ ಆಶಯ’ ಎಂದು ಮೋಹನ್ ಆಳ್ವ ಹೇಳಿದರು.

‘ಭಾನುವಾರ 1.30 ಲಕ್ಷ ಮಂದಿ ಊಟ’

‘ಜಾಂಬೂರಿಯ ಪ್ರತಿದಿನವೂ ಸಾವಿರಾರು ಸಾರ್ವಜನಿಕರು ಭೇಟಿ ನೀಡಿದ್ದಾರೆ. ರಜಾದಿನವಾದ ಭಾನುವಾರ ಬರೋಬ್ಬರಿ 1.30 ಲಕ್ಷ ಮಂದಿ ಊಟ ಮಾಡಿದ್ದಾರೆ. ಊಟಕ್ಕೆ ಬಳಸಿದ ಹಾಳೆ ತಟ್ಟೆಗಳ ಆಧಾರದಲ್ಲಿ ಈ ಲೆಕ್ಕಾಚಾರ ಸಿಕ್ಕಿದೆ. ಅಲ್ಲದೆ, ನಿತ್ಯವೂ ವಿವಿಧ ಶಾಲೆಗಳಿಂದ 25 ಸಾವಿರದಷ್ಟು ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ. ಈ ಎಲ್ಲರಿಗೂ ಉಚಿತವಾಗಿ ಊಟ- ಉಪಾಹಾರದ ವ್ಯವಸ್ಥೆ ಮಾಡಲಾಗಿದೆ‘ ಎಂದು ಮೋಹನ ಆಳ್ವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.