ADVERTISEMENT

ಎಂಜಿನಿಯರ್‌ಗಳಿಗೂ ಸಿಗದ ಉದ್ಯೋಗ

ಪದವಿ ಪೂರೈಸಿದರೂ ಕೆಲಸ ಸಿಗದ ಅಭ್ಯರ್ಥಿಗಳಲ್ಲಿ ಶೇ 13ರಷ್ಟು ಎಂಜಿನಿಯರ್‌ಗಳು

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 23:31 IST
Last Updated 8 ಜನವರಿ 2026, 23:31 IST
ಶರಣ ಪ್ರಕಾಶ ಪಾಟೀಲ
ಶರಣ ಪ್ರಕಾಶ ಪಾಟೀಲ   

ಬೆಂಗಳೂರು: ನಿರುದ್ಯೋಗಿ ಎಂಜಿನಿಯರ್‌ಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, 43 ಸಾವಿರ ತಾಂತ್ರಿಕ ಪದವೀಧರರಿಗೆ ಖಾಸಗಿ ಕಂಪನಿ, ಸರ್ಕಾರದ ಇಲಾಖೆಗಳಲ್ಲಿ ಕೆಲಸ ಸಿಕ್ಕಿಲ್ಲ.

ಪದವಿ, ಡಿಪ್ಲೊಮಾ ಪೂರೈಸಿದರೂ ಕೆಲಸ ಸಿಗದ 3.79 ಲಕ್ಷ ಮಂದಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ನೆರವಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 43,529 ಎಂಜಿನಿಯರಿಂಗ್‌, 4,250 ಡಿಪ್ಲೊಮಾ ಪೂರೈಸಿದವರು. ಅಂದರೆ, ಪದವಿ ಪೂರೈಸಿದ ನಿರುದ್ಯೋಗಿಗಳಲ್ಲಿ ಶೇ 13ರಷ್ಟು ಎಂಜಿನಿಯರ್‌ಗಳು ಇದ್ದಾರೆ.  

ಯುವನಿಧಿ ಯೋಜನೆ ಅಡಿ ಅರ್ಜಿ ಸಲ್ಲಿಸಿದವರಿಗೆ 2025–26ನೇ ಸಾಲಿನಲ್ಲಿ ₹2.98 ಕೋಟಿ ಆರ್ಥಿಕ ನೆರವು ಸಿಕ್ಕಿದೆ. ಎಂಜಿನಿಯರಿಂಗ್‌ ಹೊರತುಪಡಿಸಿ ಇತರೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ 27,843, ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ 374 ಅಭ್ಯರ್ಥಿಗಳು ಯುವನಿಧಿಯ ನೆರವು ಪಡೆದಿದ್ದಾರೆ. 

ADVERTISEMENT

‘ಪ್ರತಿ ವರ್ಷ ಕನಿಷ್ಠ 1 ಲಕ್ಷ ಎಂಜಿನಿಯರಿಂಗ್‌ ಪದವೀಧರರು ಹೊರಬರುತ್ತಿದ್ದಾರೆ. ಕ್ಯಾಂಪಸ್‌ ಆಯ್ಕೆ, ವೈಯಕ್ತಿಕ ಪ್ರತಿಭೆ ಆಧಾರದ ಮೇಲೆ ಒಂದಷ್ಟು ಅಭ್ಯರ್ಥಿಗಳು ವಿವಿಧ ಕಂಪನಿಗಳಲ್ಲಿ ಕೆಲಸ ಪಡೆಯುತ್ತಿ
ದ್ದಾರೆ. ಹಲವರಿಗೆ ಉದ್ಯೋಗ ಸಿಗುತ್ತಿಲ್ಲ. ಕೌಶಲದ ಕೊರತೆಯ ಕಾರಣ ಹೆಚ್ಚಿನವರು ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ವೈದ್ಯಕೀಯ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ವಿವರಿಸಿದರು.

‘ಕಂಪನಿಗಳು ಎಂಜಿನಿಯರಿಂಗ್ ಕಾಲೇಜುಗಳಲ್ಲೇ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಕೋರಲಾಗಿದೆ. ತರಬೇತಿಗೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಲಿದೆ’ ಎಂದರು.

 ಕ

ಯುವನಿಧಿ ಪ್ಲಸ್‌: ಶೇ 90 ಗೈರು

‘ಉದ್ಯೋಗ ಸಿಗದೆ ಇರುವುದಕ್ಕೆ ಆಯಾ ವಿಷಯಗಳಲ್ಲಿ ಕೌಶಲದ ಕೊರತೆ ಕಾರಣ ಎಂಬುದನ್ನು ಮನಗಂಡು ಯುವನಿಧಿ ಪ್ಲಸ್‌ ಯೋಜನೆ ರೂಪಿಸಲಾಗಿದೆ. ಉಚಿತ ಕೌಶಲ ತರಬೇತಿ ನೀಡಿ ಅವರು ಉದ್ಯೋಗ ಪಡೆಯುವಂತೆ ಮಾಡುವುದು ಯೋಜನೆಯ ಉದ್ದೇಶ. ಆದರೆ ತರಬೇತಿಗೆ ಶೇ 90ರಷ್ಟು ಅಭ್ಯರ್ಥಿಗಳು ಬರುತ್ತಿಲ್ಲ’ ಎಂದು ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದರು. ‘ಪದವೀಧರರಿಗೆ ಪ್ರಾಯೋಗಿಕ ತರಬೇತಿಯನ್ನು ಬಲಪಡಿಸುವ ಅಗತ್ಯವಿದೆ. ಯುವನಿಧಿಗೆ 3.79 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದರೂ ತರಬೇತಿಗೆ 27843 ಮಂದಿ ನೋಂದಾಯಿಸಿಕೊಂಡಿದ್ದಾರೆ. ತರಬೇತಿಗೆ ಮೀಸಲಿಟ್ಟ ₹27 ಕೋಟಿ ಅನುದಾನವೂ ಬಳಕೆಯಾಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.