ADVERTISEMENT

ಮೈಸೂರು ಮೃಗಾಲಯಕ್ಕೆ ಬಂದ ಜೀಬ್ರಾಗಳು

ಇಸ್ರೇಲ್‌ನ ಟೆಲ್‌ ಅವೀವ್‌ನಿಂದ ಭಾರತಕ್ಕೆ ಸಾಗಣೆ

ಕೆ.ಓಂಕಾರ ಮೂರ್ತಿ
Published 9 ಸೆಪ್ಟೆಂಬರ್ 2018, 19:41 IST
Last Updated 9 ಸೆಪ್ಟೆಂಬರ್ 2018, 19:41 IST
ಇಸ್ರೇಲ್‌ನಿಂದ ಬಂದಿರುವ ಜೀಬ್ರಾಗಳು
ಇಸ್ರೇಲ್‌ನಿಂದ ಬಂದಿರುವ ಜೀಬ್ರಾಗಳು   

ಮೈಸೂರು: ದಸರಾ ಮಹೋತ್ಸವಕ್ಕೆ ಮೈಸೂರಿಗೆ ಬರುವ ಪ್ರವಾಸಿಗರಿಗೆ ಹೊಸ ಅತಿಥಿಗಳನ್ನು ನೋಡುವ ಅವಕಾಶ ಲಭಿಸಿದೆ. ಏಕೆಂದರೆ ನಾಲ್ಕು ಜೀಬ್ರಾಗಳು ಚಾಮರಾಜೇಂದ್ರ ಮೃಗಾಲಯದ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗಿವೆ.‌

ಪ್ರಾಣಿಗಳ ವಿನಿಮಯ ಒಪ್ಪಂದದಂತೆ ಇಸ್ರೇಲ್‌ನ ಟೆಲ್‌ ಅವೀವ್‌ ನಗರದ ರಮತ್‌ ಗನ್‌ ಸಫಾರಿ ಉದ್ಯಾನದಿಂದ ಈ ಜೀಬ್ರಾಗಳನ್ನು ಕರೆತರಲಾಗಿದೆ. 2 ಗಂಡು, 2 ಹೆಣ್ಣು ಜೀಬ್ರಾಗಳನ್ನು ವಿಮಾನದಲ್ಲಿ ಇಸ್ರೇಲ್‌ನಿಂದ ಮುಂಬೈಗೆ ಸಾಗಿಸಲಾಯಿತು. ಅಲ್ಲಿಂದ ಟ್ರಕ್‌ನಲ್ಲಿ ಮೈಸೂರಿಗೆ ತರಲಾಯಿತು. ಇದರೊಂದಿಗೆ ಮೃಗಾಲಯದಲ್ಲಿರುವ ಜೀಬ್ರಾಗಳ ಸಂಖ್ಯೆ ಆರಕ್ಕೇರಿದೆ.

‘ಮೃಗಾಲಯದಲ್ಲಿ ಜೀಬ್ರಾಗಳು ಪ್ರಮುಖ ಆಕರ್ಷಣೆ. ಹೀಗಾಗಿ, ಇಸ್ರೇಲ್‌ನಿಂದ ಜೀಬ್ರಾಗಳನ್ನು ತರಿಸಿಕೊಂಡಿದ್ದೇವೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.‍ಪಿ.ರವಿ ‘ಪ‍್ರಜಾವಾಣಿ’ಗೆ ತಿಳಿಸಿದರು.

ADVERTISEMENT

1990ರಲ್ಲಿ ಜರ್ಮನಿಯ ಹಂಬರ್ಗ್‌ ನಗರದಿಂದ ಎಡ್ವರ್ಡ್‌ ಮತ್ತು ಎರಿನಾ ಎಂಬ ಗಂಡು, ಹೆಣ್ಣು ಜೀಬ್ರಾಗಳನ್ನು ತರಲಾಗಿತ್ತು. ಆದರೆ, ಅವುಗಳ ಸಂತಾನ ಮುಂದುವರಿಯಲಿಲ್ಲ. 2007ರಲ್ಲಿ ಲಖನೌ ಮೃಗಾಲಯದಿಂದ ತರಲಾಗಿದ್ದ ಜೀಬ್ರಾ 2010ರಲ್ಲಿ ಅಸುನೀಗಿತು.

ಹೀಗಾಗಿ, ಜೀಬ್ರಾಗಳ ಹುಡುಕಾಟದಲ್ಲಿದ್ದಾಗ ಮೃಗಾಲಯದ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು ಇಸ್ರೇಲ್‌ನ ಟೆಲ್‌ ಅವೀವ್‌ ಮೃಗಾಲಯ. 2014ರಲ್ಲಿ ನಾಲ್ಕು ಜೀಬ್ರಾಗಳನ್ನು ಕರೆತರಲಾಗಿತ್ತು. ಅವುಗಳಿಗೆ ಡಾನ್‌, ಡೇಜ್ಲ್‌, ರಿದ್ಧಿ, ಸುಧೀರ್‌ ಎಂದು ಹೆಸರಿಡಲಾಯಿತು. ಡಾನ್‌, ಡೇಜ್ಲ್‌ 2015ರಲ್ಲಿ ಮೃತಪಟ್ಟವು. ಸಂತಾನೋತ್ಪತ್ತಿ ಉದ್ದೇಶದಿಂದ ಮತ್ತೆ ನಾಲ್ಕು ಜೀಬ್ರಾಗಳನ್ನು ಕೋರಿ ಟೆಲ್‌ ಅವೀವ್‌ ಮೃಗಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು.

2016ರಲ್ಲಿ ರಿದ್ಧಿ ಹೆಸರಿನ ಜೀಬ್ರಾ ಮರಿ ಹಾಕಿತ್ತು. ಮೃಗಾಲಯದ 125 ವರ್ಷಗಳ ಇತಿಹಾಸದಲ್ಲಿ ಜೀಬ್ರಾಗೆ ಜನಿಸಿದ ಮೊದಲ ಮರಿ ಅದು.

ತೋಳಗಳನ್ನು ಕಾಡಿಗೆ ಬಿಡುವ ಯೋಜನೆ

ಸಂರಕ್ಷಣೆ, ಮರುಸ್ಥಾಪನೆ, ವನ್ಯಜೀವಿಗಳ ಸಮತೋಲನೆ ನಿಟ್ಟಿನಲ್ಲಿ ತೋಳಗಳನ್ನು ಮೃಗಾಲಯದಿಂದ ಕಾಡಿಗೆ ಬಿಡುವ ಯೋಜನೆಯು 3–4 ವರ್ಷಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು.

‘ಉತ್ತರ ಕರ್ನಾಟಕದ ಕೊಪ್ಪಳ, ಗದಗ, ಹಾವೇರಿ, ಬಾದಾಮಿ ಭಾಗದಲ್ಲಿ ತೋಳಗಳ ಸಂಖ್ಯೆ ಕಡಿಮೆಯಾಗಿದೆ. ಕೃಷ್ಣಮೃಗಗಳ ಸಂಖ್ಯೆ ಹೆಚ್ಚಿದ್ದು, ಇವುಗಳ ಹಾವಳಿಯಿಂದ ರೈತರಿಗೆ ತೊಂದರೆ ಉಂಟಾಗಿದೆ. ಮತ್ತೆ ತೋಳಗಳನ್ನು ಕಾಡಿಗೆ ಬಿಡುವ ಮುನ್ನ ಸಮೀಕ್ಷೆ ನಡೆಯಬೇಕು. ಅರಣ್ಯ ಇಲಾಖೆ, ಕೇಂದ್ರ ಮೃಗಾಲಯ ಪ್ರಾಧಿಕಾರದ ಒಪ್ಪಿಗೆ ಸಿಗಬೇಕು’ ಎಂದು ಹೇಳಿದರು.

ಮೈಸೂರು ಮೃಗಾಲಯದಲ್ಲಿ ಸದ್ಯ 26 ತೋಳಗಳು ಇವೆ. ಅಲ್ಲದೆ, ಪುಣೆಯಿಂದ ಗಂಡು ತೋಳ ತರಿಸಿ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಬಳಸಿಕೊಳ್ಳುವ ಯೋಜನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.