ADVERTISEMENT

ಗೂಢಚಾರಿ ಸಾಫ್ಟ್‌ವೇರ್ : ಕೇಂದ್ರ ಅಭಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 10:16 IST
Last Updated 1 ನವೆಂಬರ್ 2019, 10:16 IST
   

ನವದೆಹಲಿ: ಭಾರತೀಯರ ವಾಟ್ಸಾಪ್‌‌ಗಳಲ್ಲಿ ಇಸ್ರೇಲಿ ಮೂಲದ ಸ್ಪೈವೇರ್ ದಾಳಿ ಇಟ್ಟಿರುವ ಸಂಬಂಧ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ. ಕಾನೂನು ಉಲ್ಲಂಘಿಸಿ ಮುಗ್ದ ಜನರ ಜೀವನದ ಜೊತೆ ಚಲ್ಲಾಟ ಆಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಅಲ್ಲದೆ, ವಾಟ್ಸಾಪ್ ಸಮೂಹ ಸಂಸ್ಥೆಗೆ ಈ ಕುರಿತು ವಿವರ ನೀಡುವಂತೆ ತಿಳಿಸಿದ್ದು, ಭಾರತೀಯ ಬಳಕೆದಾರರನ್ನು ಗುರಿಯಾಗಿಸಿಕೊಂಡು ಗೂಢಾಚಾರಿ ತಂತ್ರಾಂಶಗಳಿಂದ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದು ಕಾನೂನು ಉಲ್ಲಂಘನೆಯಾಗಿದೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಭಾರತೀಯರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಸಿದ್ಧವಿದೆ ಎಂದು ಗೃಹ ಇಲಾಖೆ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ಜನವರಿಯಿಂದಲೇ ಇಸ್ರೇಲಿ ಮೂಲದ ತಂತ್ರಾಂಶವನ್ನು ಭಾರತೀಯರ ವಾಟ್ಸಾಪ್‌‌ಗಳಿಗೆ ಹರಿಬಿಟ್ಟು ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ADVERTISEMENT

ಈ ಸಂಬಂಧ ಫೇಸ್ ಬುಕ್ ಸಂಸ್ಥೆ ಇಸ್ರೇಲಿ ಮೂಲದ ಎನ್‌‌ಎಸ್‌‌ಓ ಸಂಸ್ಥೆಗೆ ನೋಟೀಸ್ ನೀಡಿದ್ದು, ಅನಧಿಕೃತ ಸಾಫ್ಟ್ ವೇರ್‌‌ಗಳನ್ನು ಹರಡಲು ವಾಟ್ಸಾಪ್ ಬಳಸಿಕೊಂಡಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.

ಎನ್ಎಸ್‌ಒ ಸಂಸ್ಥೆ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ನಾವು ನಮ್ಮ ತಂತ್ರಾಂಶ ಅಭಿವೃದ್ಧಿ ಪಡಿಸಿರುವುದು ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆ ಮಾಡುವುದಕ್ಕಾಗಲೀ ಅಥವಾ ಪತ್ರಕರ್ತರೂ ಸೇರಿದಂತೆ ಯಾವುದೇ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಡಲು ಅಲ್ಲ. ನಮ್ಮ ತಂತ್ರಾಂಶ ಕೇವಲ ಸರ್ಕಾರಗಳಅಧಿಕೃತ ಏಜೆನ್ಸಿಗಳಿಗೆ ಮಾತ್ರ ಮೀಸಲು ಎಂದು ತಿಳಿಸಿದೆ.

ಈ ಸಂಬಂಧ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿದ್ದು,ಸರ್ಕಾರ ಭಾರತೀಯ ಪ್ರಜೆಗಳ ವೈಯಕ್ತಿಕ ಸ್ವಾತಂತ್ರ್ಯ ರಕ್ಷಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ. ಅಲ್ಲದೆ, ಕೇಂದ್ರ ಸರ್ಕಾರದಲ್ಲಿ ಎಲ್ಲಾ ರೀತಿಯ ಸಾಮರ್ಥ್ಯ ಹೊಂದಿರುವ ಪಡೆಯೇ ಇದೆ. ಇದನ್ನು ಉನ್ನತ ಮಟ್ಟದ ಅಧಿಕಾರಿಗಳು ಗಮನಿಸುತ್ತಿದ್ದಾರೆ. ಎಲ್ಲಾ ರಾಜ್ಯಗಳಲ್ಲಿಯೂ ಈ ರೀತಿಯ ಅಧಿಕಾರಿಗಳ ಪಡೆ ಇದೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಭಾರತದಲ್ಲಿ ವಾಟ್ಸಾಪ್ ಅನ್ನು ಕೋಟ್ಯಾಂತರ ಜನರು ಬಳಸುತ್ತಿದ್ದು ವೈಯಕ್ತಿಕ ಮಾಹಿತಿಯನ್ನು ಕಲೆಹಾಕುತ್ತಿರುವುದು ಕಾನೂನು ಉಲ್ಲಂಘನೆಯಾಗಿದೆ. ಈ ಸಂಬಂಧ ವಿವರ ನೀಡುವಂತೆ ವಾಟ್ಸಾಪ್ ಸಂಸ್ಥೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.