ADVERTISEMENT

ರಾಣಾ ಹಸ್ತಾಂತರ | ಉಗ್ರರಿಗೆ ಶಿಕ್ಷೆ; ಭಾರತಕ್ಕೆ ಪೂರ್ಣ ಸಹಕಾರ: ಅಮೆರಿಕದ ಭರವಸೆ

ರಾಣಾ ಹಸ್ತಾಂತರ ಹಿಂದೆಯೇ ಅಮೆರಿಕದ ಭರವಸೆ

ಪಿಟಿಐ
Published 11 ಏಪ್ರಿಲ್ 2025, 15:20 IST
Last Updated 11 ಏಪ್ರಿಲ್ 2025, 15:20 IST
<div class="paragraphs"><p>ತಹವ್ವುರ್ ರಾಣಾ</p><p></p></div>

ತಹವ್ವುರ್ ರಾಣಾ

   

– ಪಿಟಿಐ ಚಿತ್ರಗಳು

ADVERTISEMENT

ನ್ಯೂಯಾರ್ಕ್: ‘ಮುಂಬೈನಲ್ಲಿ ನಡೆದಿದ್ದ 26/11 ಉಗ್ರರ ದಾಳಿ ಕೃತ್ಯದ ಸಂಬಂಧ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವ ಭಾರತದ ಪ್ರಯತ್ನಕ್ಕೆ ಅಮೆರಿಕ ಪೂರ್ಣ ಸಹಕಾರ ನೀಡಲಿದೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯು ಶುಕ್ರವಾರ ಪ್ರಕಟಿಸಿದೆ. 

ಭಾರತಕ್ಕೆ 26/11 ಕೃತ್ಯದ ಸಂಚುಕೋರ ತಹವ್ವುರ್ ರಾಣಾ ಹಸ್ತಾಂತರದ ಹಿಂದೆಯೇ ಈ ಮಾತು ಹೇಳಿರುವ ಇಲಾಖೆಯ ವಕ್ತಾರೆ ಟ್ಯಾಮಿ ಬ್ರೂಸ್‌, ‘ಜಾಗತಿಕವಾಗಿ ಭಯೋತ್ಪಾದನೆ ಹತ್ತಿಕ್ಕಲು ಅಮೆರಿಕ–ಭಾರತ ಒಟ್ಟಾಗಿ ಕಾರ್ಯನಿರ್ವಹಿಸಲಿವೆ’ ಎಂದರು.

‘ಜಗತ್ತನ್ನೇ ಬೆಚ್ಚಿಬೀಳಿಸಿದ್ದ, ಆರು ಮಂದಿ ಅಮೆರಿಕನ್ನರೂ ಸೇರಿ 166 ಮಂದಿ ಮೃತಪಟ್ಟಿದ್ದ 26/11 ದಾಳಿ ಕೃತ್ಯವನ್ನು ಈಗ ಕೆಲವರು ಸ್ಮರಿಸದಿರಬಹುದು‘ ಎಂದರು. ‘ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಲ್ಲಿ ರಾಣಾ ಹಸ್ತಾಂತರವು ಉತ್ತಮ ನಡೆ’ ಎಂದು ಹೇಳಿದರು.

ಇದಕ್ಕೂ ಮುನ್ನ ನ್ಯಾಯಾಂಗ ಇಲಾಖೆಯ ವಕ್ತಾರರು, ‘ದಾಳಿ ಕೃತ್ಯದ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ರಾಣಾ ಹಸ್ತಾಂತರ ಪ್ರಕ್ರಿಯೆ ನಿರ್ಣಾಯಕವಾದ ಹೆಜ್ಜೆ’ ಎಂದು ಪ್ರತಿಕ್ರಿಯಿಸಿದರು. 

ಪಾಕ್‌ ಮೂಲದ ಕೆನಡಾ ಪ್ರಜೆಯಾಗಿರುವ ರಾಣಾ, 26/11 ಕೃತ್ಯಕ್ಎಕ ಪಾಕ್‌ ಮೂಲದ ಅಮೆರಿಕದ ಉಗ್ರ ಡೇವಿಡ್‌ ಕೋಲ್ಮನ್ ಹೆಡ್ಲಿ ಜೊತೆಗೂಡಿ ಸಂಚು ನಡೆಸಿದ್ದ.

‘ಉಗ್ರರ ಕೃತ್ಯ ಶ್ಲಾಘಿಸಿದ್ದ ರಾಣಾ’

ನ್ಯೂಯಾರ್ಕ್ (ಪಿಟಿಐ) ‘ಭಾರತೀಯರು ಆ ದಾಳಿಗೆ ಅರ್ಹರಾಗಿದ್ದರು. ಕೃತ್ಯ ನಡೆಸಿ ಸತ್ತವರಿಗೆ ಪಾಕ್‌ನ ಅತ್ಯುನ್ನತ ಪ್ರಶಸ್ತಿ ನೀಡಬೇಕು’ ಎಂದು 26/11ರ ದಾಳಿ ಕೃತ್ಯದ ಸಂಚುಕೋರ ತಹವ್ವುರ್ ರಾಣಾ ಹೇಳಿದ್ದ’ ಎಂದು ಅಮೆರಿಕದ ನ್ಯಾಯಾಂಗ ಇಲಾಖೆಯು ತಿಳಿಸಿದೆ.

‘ದಾಳಿ ಬಳಿಕ ರಾಣಾ, ಸಹಚರ ಹೆಡ್ಲಿ ಉದ್ದೇಶಿಸಿ ‘ಭಾರತೀಯರು ಇದಕ್ಕೆ ಅರ್ಹರಾಗಿದ್ದರು’ ಎಂದಿದ್ದ’ ಎಂದು ಇಲಾಖೆಯು ಹೇಳಿಕೆ ನೀಡಿದೆ.

‘ದಾಳಿ ನಡೆಸಬೇಕಿದ್ದ ಸ್ಥಳಗಳನ್ನು ಗುರುತಿಸಲು ಅಮೆರಿಕದ ಉಗ್ರ ಡಾವುದ್ ಗಿಲಾನಿ ಮುಂಬೈಗೆ ತೆರಳಲು ರಾಣಾ ಸಹಕರಿಸಿದ್ದ. ಹೆಡ್ಲಿಗೆ ಪಾಕ್‌ನಲ್ಲಿ ನೆಲೆ ಹೊಂದಿದ್ದ ಎಲ್‌ಇಟಿ ಸಂಘಟನೆ ತರಬೇತಿ ನೀಡಿತ್ತು’ ಎಂದು ಭಾರತ ಆರೋಪಿಸಿತ್ತು. 

26/11 ಕೃತ್ಯದಲ್ಲಿ ‘ಲಷ್ಕರ್ ಎ ತಯ್ಯಬಾ’ ಉಗ್ರರ ಸಂಘಟನೆಯ 9 ಭಯೋತ್ಪಾದಕರು ಭದ್ರತಾ ಸಿಬ್ಬಂದಿಯ ಗುಂಡಿಗೆ ಬಲಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.