
ಇಸ್ಲಾಮಾಬಾದ್: ಅಫ್ಗಾನಿಸ್ತಾನದೊಂದಿಗಿನ ಶಾಶ್ವತ ಕದನವಿರಾಮ ಕುರಿತ ಮಾತುಕತೆಯು ವಿಫಲಗೊಂಡಿದೆ ಎಂದು ಪಾಕಿಸ್ತಾನ ಬುಧವಾರ ತಿಳಿಸಿದೆ.
ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದೊಂದಿಗಿನ ಗಡಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇಸ್ತಾಂಬುಲ್‌ನಲ್ಲಿ ಕತಾರ್ ಹಾಗೂ ಟರ್ಕಿ ದೇಶಗಳ ಮಧ್ಯಸ್ಥಿಕೆಯಲ್ಲಿ ನಾಲ್ಕು ದಿನಗಳ ಮಾತುಕತೆ ಜರುಗಿತ್ತು.
‘ಅಫ್ಗಾನಿಸ್ತಾನವು ಪ್ರಮುಖ ಸಮಸ್ಯೆಯ ಕುರಿತು ಮಾತನಾಡುವುದನ್ನು ಬಿಟ್ಟು ಕುತಂತ್ರದಿಂದ ವಿಷಯವನ್ನು ಬೇರೆಡೆಗೆ ತಿರುಗಿಸುತ್ತಿದೆ. ಗಡಿ ಸಂಘರ್ಷವನ್ನು ಕೊನೆಗೊಳಿಸುವ ಬಗ್ಗೆ ಅವರು ಮಾತನಾಡುತ್ತಿಲ್ಲ ಎಂದು ಪಾಕಿಸ್ತಾನ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಹೇಳಿದ್ದಾರೆ.
‘ಶಾಂತಿ ಮಾತುಕತೆಗೆ ಪಾಕ್ ಉತ್ಸಾಹ ತೋರಿಸುತ್ತಿದೆ. ಆದರೆ, ಅಫ್ಗಾನಿಸ್ತಾನವು ಪಾಕಿಸ್ತಾನ ವಿರೋಧಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವ ಕುರಿತು ಯಾವುದೇ ಭರವಸೆ ನೀಡಿಲ್ಲ’ ಎಂದು ತಿಳಿಸಿದ್ದಾರೆ.
ಭಯೋತ್ಪಾದನೆಯಿಂದ ತನ್ನ ಜನರನ್ನು ಕಾಪಾಡಿಕೊಳ್ಳಲು ಯಾವುದೇ ರೀತಿಯ ಕ್ರಮಗಳನ್ನು ಬೇಕಾದರೂ ತೆಗೆದುಕೊಳ್ಳುತ್ತೇವೆ. ಉಗ್ರರನ್ನು ನಾಶಪಡಿಸಲು ಅವರ ಅಡಗುತಾಣ, ಅವರ ಪರವಾಗಿರುವವರನ್ನು ಕೂಡ ಸದೆಬಡೆಯುತ್ತೇವೆ ಎಂದು ಹೇಳಿದ್ದಾರೆ
ಅಫ್ಗಾನಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಕೆ ಕುಮ್ಮಕ್ಕು ನೀಡುತ್ತಿದೆ ಎಂದು ಪಾಕ್ ಆರೋಪಿಸಿತ್ತು. ಇದರ ಬೆನ್ನಲ್ಲೇ ಅ. 9 ರಂದು ಪಾಕಿಸ್ತಾನವು ತನ್ನ ಗಡಿಯಲ್ಲಿ ದಾಳಿ ಮಾಡಿದೆ ಎಂದು ಅಫ್ಗನ್ ಆರೋಪಿಸಿತ್ತು. ಇದು ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ಅ. 19 ರಂದು ಕತಾರ್ ಹಾಗೂ ಟರ್ಕಿ ದೇಶಗಳ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಕದನ ವಿರಾಮಕ್ಕೆ ಎರಡು ದೇಶಗಳು ಒಪ್ಪಿಗೆ ಸೂಚಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.