
ಪ್ರಾತಿನಿಧಿಕ ಚಿತ್ರ
ಕರಾಚಿ: ದಶಕಗಳ ಹಿಂದೆ ಕಳೆದು ಹೋಗಿದ್ದ ಪಾಕಿಸ್ತಾನದ ಬಾಲಕಿಯೊಬ್ಬಳು ಕೃತಕ ಬುದ್ಧಿಮತ್ತೆ (ಎಐ) ಮುಖ ಗುರುತು ಪತ್ತೆ ಹಚ್ಚುವ ತಂತ್ರಜ್ಞಾನದ ಸಹಾಯದಿಂದ ಈಗ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾಳೆ.
2008ರಲ್ಲಿ ಕಿರಣ್ ಐಸ್‌ಕ್ರೀಮ್ ಖರೀದಿಸಲು ತೆರಳಿದ್ದಾಗ ಮನೆಯ ದಾರಿ ತಪ್ಪಿ, ಕಳೆದುಹೋಗಿದ್ದಳು. ಅವರನ್ನು ಬಿಲ್ಕಿಸ್ ಈದಿ ಎನ್ನುವವರು ಕರೆದೊಯ್ದಿದ್ದರು. ಕೆಲವು ದಿನಗಳ ನಂತರ ಕರಾಚಿಯಲ್ಲಿರುವ ಈಧಿ ಫೌಂಡೇಶನ್ ಎನ್‌ಜಿಒಗೆ ಸೇರಿಸಿದ್ದರು. ಕಿರಣ್‌ಗೆ ಈಗ 27 ವರ್ಷ.
‘ಮನೆಯ ದಾರಿ ತಿಳಿಯದೆ ಅಳುತ್ತಾ ನಿಂತಿದ್ದೆ. ಆಗ ಒಬ್ಬ ಮಹಿಳೆ ಇಸ್ಲಾಮಾಬಾದ್‌ನಲ್ಲಿರುವ ಈಧಿ ಕೆಂದ್ರಕ್ಕೆ ಕರೆದೊಯ್ದಿದ್ದರು. ಅದನ್ನು ಹೊರತು ಬೇರೆ ಏನೂ ನೆನಪಿಲ್ಲ’ ಎಂದು ಈಗ 27ರ ಹರೆಯದಲ್ಲಿರುವ ಯುವತಿ ಹೇಳಿದ್ದಾಳೆ.
ಅಲ್ಲಿಂದ ನಂತರ ಕಿರಣ್ ಬಿಲ್ಕಿಸ್ ಅವರ ಪೋಷಣೆಯಲ್ಲಿ ಬೆಳೆದಿದ್ದಾಳೆ. ‘ಹಲವು ಬಾರಿ ಇಸ್ಲಾಮಾಬಾದ್‌ಗೆ ಭೇಟಿ ನೀಡಿದರೂ ಕಿರಣ್ ಪೋಷಕರನ್ನು ಹುಡುಕಲು ಸಾಧ್ಯವಾಗಿರಲಿಲ್ಲ’ ಎಂದು ಫೌಂಡೇಶನ್‌ನ ಈಗಿನ ಮುಖ್ಯಸ್ಥೆ ಸಬಾ ಫೈಸಲ್ ಈದಿ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಫೌಂಡೇಶನ್, ಪಂಜಾಬ್ ಪ್ರಾಂತ್ಯದಲ್ಲಿ ಸೇಫ್ ಸಿಟಿ ಪ್ರಾಜೆಕ್ಟ್‌ನಲ್ಲಿ ಸೈಬರ್ ಭದ್ರತಾ ತಜ್ಞನಾಗಿ ಕೆಲಸ ಮಾಡುತ್ತಿರುವ ನಬೀಲ್ ಅಹಮದ್ ಅವರನ್ನು ಸಂಪರ್ಕಿಸಿತ್ತು. ಅವರಿಗೆ ಕಿರಣ್‌ಳ ಇತ್ತೀಚಿನ ಫೋಟೊ ಮತ್ತು ಅಗತ್ಯ ಮಾಹಿತಿಯನ್ನು ನೀಡಲಾಗಿತ್ತು.
ನಬೀಲ್ ಅವರು ಇಸ್ಲಾಮಾದ್‌ನಲ್ಲಿ ಕಳೆದುಹೋದ ಬಾಲಕಿಯರ ವರದಿಯನ್ನು ಆಧರಿಸಿ ಎಐ ಮೂಲಕ ಮುಖ ಗುರುತು ಮತ್ತು ಟ್ರ್ಯಾಕಿಂಗ್ ಸಾಫ್ಟ್‌ವೇರ್ ಮೂಲಕ ಬಾಲಕಿಯ ಕುಟುಂಬವನ್ನು ಪತ್ತೆ ಮಾಡಿದ್ದಾರೆ.
ದರ್ಜಿಯಾಗಿರುವ ಕಿರಣ್ ತಂದೆ ಅಬ್ದುಲ್ ಮಜೀದ್ ಅವರಿಗೆ ಮಗಳ ಪತ್ತೆ ಬಗ್ಗೆ ಮಾಹಿತಿ ನೀಡಿದ ನಂತರ ಅವರು ಮಗಳನ್ನು ಕಾಣಲು ಕರಾಚಿಗೆ ಬಂದಿದ್ದಾರೆ. ‘ಕಿರಣ್‌ಳನ್ನು ಹಲವು ವರ್ಷಗಳ ಕಾಲ ಹುಡುಕಿದ್ದೇವೆ. ಪತ್ರಿಕೆಗಳಲ್ಲೂ ಫೋಟೊವನ್ನು ಹಾಕಿಸಿ ಹುಡುಕಿಸಿದ್ದೇವೆ. ಆದರೆ ಪ್ರಯೋಜನವಾಗಿರಲಿಲ್ಲ. ಪಂಜಾಬ್‌ನ ಸೇಫ್ ಸಿಟಿ ಪ್ರಾಜೆಕ್ಟ್‌ನ ತಂಡ ನಿಮ್ಮ ಮಗಳನ್ನು ಪತ್ತೆ ಮಾಡಿದ್ದೇವೆ ಎಂದಾಗ ಮಗಳು ಸಿಗುವುದಿಲ್ಲ ಎಂಬ ನಿರಾಶೆ ಮಾಯವಾಗಿ ಹೊಸ ಭರವಸೆ ಮೂಡಿತ್ತು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.