ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಲಂಡನ್: ಬೇರೆಯವರ ಮೃತದೇಹದ ಅವಶೇಷಗಳನ್ನು ಕಳುಹಿಸಿಕೊಡಲಾಗಿದೆ ಎಂದು ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಇಬ್ಬರು ಬ್ರಿಟಿಷ್ ಪ್ರಜೆಗಳ ಕುಟುಂಬದ ವಕೀಲರು ಹೇಳಿದ್ದಾರೆ.
ಒಂದು ಪ್ರಕರಣದಲ್ಲಿ ಶವಪೆಟ್ಟಿಗೆಯಲ್ಲಿದ್ದ ಅವಶೇಷಗಳ ಡಿಎನ್ಎ ಪರೀಕ್ಷೆ ಮಾಡಿದಾಗ ಅದರಲ್ಲಿ ಒಬ್ಬರಿಗಿಂತ ಹೆಚ್ಚಿನ ಸಂತ್ರಸ್ತರ ದೇಹದ ಭಾಗ ಇರುವುದು ಗೊತ್ತಾಗಿದೆ. ಇನ್ನೊಂದು ಪ್ರಕರಣದಲ್ಲಿ ಡಿಎನ್‌ಎ ಮಾದರಿ ಕುಟುಂಬದವರೊಂದಿಗೆ ತಾಳೆಯಾಗಿಲ್ಲ ಎಂದು ಅವರನ್ನು ಪ್ರತಿನಿಧಿಸುವ ವಕೀಲ ಜೇಮ್ಸ್ ಹ್ಯಾಲಿ ಪ್ರಾಟ್ ತಿಳಿಸಿದ್ದಾರೆ.
‘ಎರಡೂ ಕುಟುಂಬಗಳಿಗೆ ತಪ್ಪಾದ ಅವಶೇಷಗಳನ್ನು ಕಳುಹಿಸಲಾಗಿದೆ. ಇದರಿಂದ ಅಂತಿಮ ಸಂಸ್ಕಾರ ವಿಳಂಬವಾಗಿದೆ ಎಂದು ಪ್ರಾಟ್ ಹೇಳಿದ್ದಾರೆ. 260ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಅಹಮದಾಬಾದ್ ವಿಮಾನ ಅವಘಡದಲ್ಲಿ ಬ್ರಿಟಿಷ್ ಪ್ರಜೆಗಳೂ ಇದ್ದರು. ಪ್ರಾಟ್ 20 ಸಂತ್ರಸ್ತರ ಕುಟುಂಬವನ್ನು ಪ್ರತಿನಿಧಿಸುತ್ತಿದ್ದಾರೆ.
ಈಗಾಗಲೇ ಪ್ರೀತಿ ಪಾತ್ರರನ್ನು ಕಳೆದುಕೊಂಡು ಆಘಾತ ಎದುರಿಸುತ್ತಿರುವ ಕುಟುಂಬಸ್ಥರಿಗೆ ಇದರಿಂದಾಗಿ ವರ್ಣಿಸಲಾಗದ ಮಾನಸಿಕ ಯಾತನೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಯಾವ ಕುಟುಂಬಕ್ಕೆ ತಪ್ಪಾದ ಅವಶೇಷ ಸಿಕ್ಕಿದೆ ಎನ್ನುವುರದ ಬಗ್ಗೆ ಪ್ರಾಟ್ ಮಾಹಿತಿ ನೀಡಿಲ್ಲ.
ತಾಳೆಯಾಗದ ಅವಶೇಷ ನೀಡಿರುವ ಬಗ್ಗೆ ಬ್ರಿಟನ್‌ನ ಡೈಲಿ ಮೇಲ್ ದಿನಪತ್ರಿಕೆ ಮೊದಲು ವರದಿ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿಯವರ 2 ದಿನಗಳ ಲಂಡನ್ ಪ್ರವಾಸ ಆರಂಭಕ್ಕೂ ಮುನ್ನ ಈ ವರದಿ ಪ್ರಕಟವಾಗಿದೆ.
ಈ ವರದಿಗೆ ಪ್ರಕಟಣೆ ಮೂಲಕ ಬುಧವಾರ ಪ್ರತಿಕ್ರಿಯಿಸಿದ್ದ ಭಾರತ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, ‘ಸಂತ್ರಸ್ತರನ್ನು ಗುರುತಿಸುವಾಗ ಅಧಿಕಾರಿಗಳು ಸ್ಥಾಪಿತ ಶಿಷ್ಟಾಚಾರಗಳನ್ನು ಹಾಗೂ ತಾಂತ್ರಿಕ ಅವಶ್ಯಕತೆಗಳನ್ನು ಪಾಲಿಸಿದ್ದರು. ಈ ವಿಷಯವನ್ನು ಪರಿಹರಿಸಲು ಭಾರತ ಸರ್ಕಾರವು ಬ್ರಿಟಿಷ್ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದರು.
‘ಎಲ್ಲಾ ಮೃತರ ಅವಶೇಷಗಳನ್ನು ಅತ್ಯಂತ ವೃತ್ತಿಪರತೆಯಿಂದ, ಮೃತರ ಘನತೆಗೆ ಕುಂದು ಬಾರದಂತೆ ನಿರ್ವಹಿಸಲಾಗಿದೆ’ ಎಂದು ಅವರು ಹೇಳಿದ್ದರು.
ಒಟ್ಟು 53 ಬ್ರಿಟಿಷ್ ಪ್ರಜೆಗಳು ದುರಂತಕ್ಕೀಡಾದ ವಿಮಾನದಲ್ಲಿದ್ದರು.
ಅವಶೇಷಗಳಲ್ಲಿನ ದೋಷಗಳನ್ನು ಡಿಎನ್‌ಎ ಪರೀಕ್ಷೆ ಮಾಡುವ ಮೂಲಕ ಇನ್ನರ್ ವೆಸ್ಟ್ ಲಂಡನ್‌ನ ತನಿಖಾಧಿಕಾರಿ ಪತ್ತೆ ಹಚ್ಚಿದ್ದಾರೆ. ಈ ಕೆಲಸಕ್ಕೆ ಅವರನ್ನು ನಿಯೋಜಿಸಲಾಗಿತ್ತು ಎಂದು ಪ್ರಾಟ್ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಬಯಸಿ ತನಿಖಾಧಿಕಾರಿ ಡಾ. ಫಿಯೊನಾ ವಿಲ್‌ಕಾಕ್ಸ್ ಅವರನ್ನು ಸಂಪರ್ಕಿಸಲಾಯಿತಾದರೂ, ಅವರಿಂದ ಯಾವುದೇ ಉತ್ತರ ಬಂದಿಲ್ಲ.
ಇಲ್ಲಿಯವರೆಗೆ 12 ಬ್ರಿಟಿಷ್ ಸಂತ್ರಸ್ತರ ದೇಹದ ಅವಶೇಷಗಳನ್ನು ಕಳುಹಿಸಿಕೊಡಲಾಗಿದ್ದು, ಈ ಪೈಕಿ ಹತ್ತರ ಡಿಎನ್‌ಎ ತಾಳೆಯಾಗಿದೆ ಎಂದು ಪ್ರಾಟ್ ತಿಳಿಸಿದ್ದಾರೆ.
ದುರಂತದ ಬಳಿಕ ಭಾರತದಲ್ಲಿರುವ ಬ್ರಿಟಿಷ್ ಕುಟುಂಬಗಳಿಗೆ ಸಲಹೆ ನೀಡಲು ವಿಧಿವಿಜ್ಞಾನ ತಜ್ಞರನ್ನು ಬ್ರಿಟನ್ ಕಳುಹಿಸಿದ್ದರೂ, ಡಿಎನ್‌ಎ ಗುರುತಿಸುವಿಕೆ ಮತ್ತು ಶವಪೆಟ್ಟಿಗೆಗಳಲ್ಲಿ ಅವಶೇಷಗಳನ್ನು ಇಡುವ ಪ್ರಕ್ರಿಯೆಯನ್ನು ಭಾರತೀಯ ಅಧಿಕಾರಿಗಳು ನಿರ್ವಹಿಸಿದ್ದಾರೆ ಎಂದು ಬ್ರಿಟನ್‌ನ ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥರ ಮಂಡಳಿಯ ವಕ್ತಾರರು ಇಮೇಲ್ ಮೂಲಕ ತಿಳಿಸಿದ್ದಾರೆ.
ಡಿಎನ್‌ಎ ಪರೀಕ್ಷೆಗೆ ಮಾದರಿಗಳನ್ನು ನೀಡಲು ಬ್ರಿಟಿಷ್ ಸಂತ್ರಸ್ತರ ಕುಟುಂಬಸ್ಥರು ಭಾರತಕ್ಕೆ ತೆರಳಿದ್ದರು. ಅವಶೇಷಗಳನ್ನು ಸರಿಯಾಗಿ ನಿರ್ವಹಿಸಲಾಗುವುದು ಎಂದು ಭಾರತದ ಅಧಿಕಾರಿಗಳು ಅವರಿಗೆ ಭರವಸೆ ನೀಡಿದ್ದರು ಎಂದು ಪ್ರಾಟ್ ಹೇಳಿದ್ದಾರೆ.
ಕುಟುಂಬಸ್ಥರು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿರುವುದು ನಿಜವಾಗಿಯೂ ಭಯಾನಕ ಎಂದು ಪ್ರಾಟ್ ಹೇಳಿದ್ದಾರೆ.
(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.