ADVERTISEMENT

ಬಾಟಲಿಯಲ್ಲಿ ಮೂತ್ರ ವಿಸರ್ಜನೆ: ತಪ್ಪೊಪ್ಪಿಕೊಂಡ ಅಮೆಜಾನ್

ಏಜೆನ್ಸೀಸ್
Published 4 ಏಪ್ರಿಲ್ 2021, 6:23 IST
Last Updated 4 ಏಪ್ರಿಲ್ 2021, 6:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ಇ ಕಾಮರ್ಸ್ ಕ್ಷೇತ್ರದ ದೈತ್ಯ ಸಂಸ್ಥೆ ಅಮೆಜಾನ್, ಡ್ರೈವರ್‌ಗಳು ಪ್ಲಾಸ್ಟಿಕ್ ಬಾಟಲಿಯಲ್ಲೇ ಮೂತ್ರ ವಿಸರ್ಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ಜನಪ್ರತಿನಿಧಿಯ ಕ್ಷಮೆ ಕೋರಿಕೊಂಡು, ತಪ್ಪು ಒಪ್ಪಿಕೊಂಡಿದೆ.

ವಿಸ್ಕಾನ್ಸಿನ್‌ನ ಡೆಮಾಕ್ರಟ್ ಪಕ್ಷದ ಮಾರ್ಕ್ ಪೋಕನ್ ಎಂಬವರ ಟ್ವೀಟ್‌ನಿಂದ, ಅಮೆಜಾನ್ ಕಂಪನಿಯ ಚಾಲಕರು ಪ್ಲಾಸ್ಟಿಕ್ ಬಾಟಲಿಯಲ್ಲೇ ಮೂತ್ರ ಹೊಯ್ಯುತ್ತಾರೆ ಎನ್ನುವ ಅಂಶ ಬಹಿರಂಗವಾಗಿತ್ತು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ್ದ ಅಮೆಜಾನ್, ಅಂತಹ ಕೆಲಸವನ್ನು ಯಾರೂ ಮಾಡುವುದಿಲ್ಲ ಎಂದಿತ್ತು.

ಆದರೆ ಅಮೆರಿಕದ ಹಲವು ಮಾಧ್ಯಮಗಳು ನಂತರದಲ್ಲಿ ಅಮೆಜಾನ್ ಉದ್ಯೋಗಿಗಳ ಹೇಳಿಕೆ ಆಧರಿಸಿ ವರದಿ ಮಾಡಿದ್ದು, ಈ ವಿಚಾರ ಸುಳ್ಳಲ್ಲ ಎಂದಿದ್ದವು.

ADVERTISEMENT

ದಿ ಇಂಟರ್‌ಸೆಪ್ಟ್ ಎನ್ನುವ ವೆಬ್‌ಸೈಟ್, ಈ ವಿಚಾರದ ಬಗ್ಗೆ ಅಮೆಜಾನ್ ಹಿರಿಯ ಅಧಿಕಾರಿಗಳಿಗೆ ಗೊತ್ತಿದೆ ಎಂದು ಹೇಳಿತ್ತು. ಅಮೆಜಾನ್ ಕಂಪನಿಯ ಚಾಲಕರು ಮತ್ತು ಪ್ರಾಸೆಸಿಂಗ್ ಘಟಕದ ಉದ್ಯೋಗಿಗಳು ಈ ಬಗ್ಗೆ ದೂರಿರುವುದನ್ನು ಕೂಡ ಅದು ಪ್ರಸ್ತಾಪಿಸಿತ್ತು.

ಈ ಬಗ್ಗೆ ಚರ್ಚೆಯಾಗುತ್ತಲೇ ಅಮೆಜಾನ್ ಹೇಳಿಕೆ ಬಿಡುಗಡೆ ಮಾಡಿದ್ದು, ಪೋಕನ್ ಅವರ ಕ್ಷಮೆ ಕೋರಿದೆ. ಅಮೆಜಾನ್ ಘಟಕಗಳಲ್ಲಿ ಶೌಚಗೃಹಗಳಿದ್ದು, ಅವುಗಳನ್ನು ಯಾವಾಗ ಬೇಕಾದರೂ ಬಳಸಬಹುದು. ಆದರೆ ಕೆಲವೊಮ್ಮೆ ಟ್ರಾಫಿಕ್ ಇದ್ದರೆ, ಸಾರ್ವಜನಿಕ ಶೌಚಗೃಹ ಮುಚ್ಚಿದ್ದರೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೌಚಗೃಹ ಇಲ್ಲದಿದ್ದರೆ, ಚಾಲಕರಿಗೆ ಆಯ್ಕೆಯಿರುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತೇವೆ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.