ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವ ದೃಶ್ಯ
Credit: X@rawsalerts
ಡೆನ್ವರ್: ಡೆನ್ವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ 173 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಿಯಾಮಿಗೆ ತೆರಳುತ್ತಿದ್ದ ಅಮೇರಿಕನ್ ಏರ್‌ಲೈನ್ಸ್ (ಬೋಯಿಂಗ್ 737 MAX 8) ವಿಮಾನವು ಡೆನ್ವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುವ ಕೆಲವೇ ಸೆಕೆಂಡುಗಳ ಮೊದಲು ಲ್ಯಾಂಡಿಂಗ್ ಗೇರ್‌ನಲ್ಲಿ ಸಮಸ್ಯೆ ಉಂಟಾದ ಪರಿಣಾಮ ರನ್‌ವೇಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ.
ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆಂದು ವರದಿಯಾಗಿದೆ. ಆದರೆ, ಹೊಗೆ ಮತ್ತು ಬೆಂಕಿಯ ನಡುವೆ ಭಯಭೀತರಾದ ಪ್ರಯಾಣಿಕರು ವಿಮಾನ ತುರ್ತು ನಿರ್ಗಮನ ದ್ವಾರದಿಂದ ಇಳಿಯುತ್ತಿರುವ ದೃಶ್ಯಗಳು ಜನರನ್ನು ಆತಂಕಕ್ಕೆ ದೂಡಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ ಮಧ್ಯಾಹ್ನ 2.45ರ ಸುಮಾರಿಗೆ ಈ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಡೆನ್ವರ್ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
‘ಲ್ಯಾಂಡಿಂಗ್ ಗೇರ್‌ನಲ್ಲಿ ಸಮಸ್ಯೆ ಉಂಟಾದ ಪರಿಣಾಮ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.ನಮ್ಮ ನಿರ್ವಹಣಾ ತಂಡವು ವಿಮಾನವನ್ನು ತಪಾಸಣೆ ನಡೆಸುತ್ತಿದೆ’ ಎಂದು ಅಮೇರಿಕನ್ ಏರ್‌ಲೈನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವರ್ಷ ಮಾರ್ಚ್ 14ರಂದು ಡೆನ್ವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು.
ಆರು ಸಿಬ್ಬಂದಿ ಸೇರಿ 178 ಪ್ರಯಾಣಿಕರು ವಿಮಾನದಲ್ಲಿದ್ದರು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು.
ಕೊಲೊರಡೊ ಸ್ಪ್ರೀಂಗ್ಸ್ ವಿಮಾನ ನಿಲ್ದಾಣದಿಂದ ಡಲ್ಲಾಸ್ ಪೋರ್ಟ್ ವರ್ತ್‌ಗೆ ಹೊರಟ್ಟಿದ್ದ ವಿಮಾನ ಎಂಜಿನ್‌ನಲ್ಲಿ ಸಮಸ್ಯೆ ಕಾಣಿಸಿದ ನಂತರ ಡೆನ್ವರ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ನಿಲ್ದಾಣದ ಸಿ28 ಗೇಟ್ ಪ್ರವೇಶಿಸುತ್ತಿದ್ದಂತೆಯೇ ಬೋಯಿಂಗ್ 737-800ರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿತು. ತಕ್ಷಣವೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರ ತರಲಾಗಿತ್ತು.
ಜೂನ್ 12ರಂದು ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳಲು ಏರ್ ಇಂಡಿಯಾ ವಿಮಾನ (ಬೋಯಿಂಗ್ 787 ಡ್ರೀಮ್‌ಲೈನರ್) ಟೇಕ್–ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘಾನಿನಗರದ ವೈದ್ಯಕೀಯ ಕಾಲೇಜಿನ ಸಂಕೀರ್ಣದಲ್ಲಿದ್ದ ಕಟ್ಟಡಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 241 ಪ್ರಯಾಣಿಕರು, ಸಿಬ್ಬಂದಿ ಹಾಗೂ ಘಟನಾ ಸ್ಥಳದಲ್ಲಿದ್ದ 19 ಮಂದಿ ಮೃತಪಟ್ಟಿದ್ದರು. ಪ್ರಯಾಣಿಕರೊಬ್ಬರು ಅಪಾಯದಿಂದ ಪಾರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.