ಜೆಫ್ ಬಿಜೋಸ್, ಲಾರೆನ್ ಸ್ಯಾಂಚೆಜ್
ಬೆಂಗಳೂರು: ಕಳೆದ ವರ್ಷ ಪ್ರೀತಿಯಲ್ಲಿ ಬಿದ್ದಿದ್ದ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಅಮೆಜಾನ್ ಕಂಪನಿಯ ಸ್ಥಾಪಕ ಜೆಫ್ ಬಿಜೋಸ್ ಹಾಗೂ ಅಮೆರಿಕದ ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ಅವರು ನಿನ್ನೆ (ಜೂನ್ 27) ಇಟಲಿಯ ವೆನಿಸ್‌ನಲ್ಲಿ ಅದ್ಧೂರಿ ವಿವಾಹವಾದರು.
ವಿಶೇಷ ಎಂದರೆ ಬಿಜೋಸ್ ಅವರಿಗೆ 61 ವರ್ಷ, ಲಾರೆನ್ ಅವರಿಗೆ 55 ವರ್ಷ. ಇಬ್ಬರಿಗೂ ಇದು ಎರಡನೇ ಮದುವೆ.
ವೆನಿಸ್‌ನ ಖಾಸಗಿ ದ್ವೀಪದ ಐತಿಹಾಸಿಕ ಐಷಾರಾಮಿ ಹೋಟೆಲ್ ಒಂದರಲ್ಲಿ ಈ ಜೋಡಿ ಜಗತ್ತಿನ ಕಣ್ಣು ಕುಕ್ಕುವಂತೆ ಮದುವೆಯಾಗಿದೆ. ಕೆಲ ವರದಿಗಳ ಪ್ರಕಾರ ಒಂದು ದಿನದ ಮದುವೆಗೆ ₹480 ಕೋಟಿಗೂ ಅಧಿಕ ಹಣ ವೆಚ್ಚವಾಗಿದೆ ಎನ್ನಲಾಗಿದೆ. ಬಿಜೋಸ್ ಆಪ್ತರು, ಸ್ನೇಹಿತರು ಕುಟುಂಬದ ಸುಮಾರು 500 ಜನ ಮಾತ್ರ ಭಾಗಿಯಾಗಿದ್ದರು.
2019 ರಲ್ಲಿ ಮೊದಲ ಹೆಂಡತಿ ಮೆಕೆಂಜಿ ಸ್ಕಾಟ್ ಅವರಿಗೆ ವಿಚ್ಚೇಧನ ನೀಡಿದ ನಂತರ ಬಿಜೋಸ್ ಅವರು ಲಾರೆನ್ ಜೊತೆ ಸಂಬಂಧದಲ್ಲಿದ್ದರು. ಒಂದು ವರ್ಷದ ಬಳಿಕ ಇಬ್ಬರೂ ಹೊಸ ಜೀವನ ಪ್ರಾರಂಭಿಸಿದ್ದಾರೆ.
2005 ರಲ್ಲಿ ಪ್ಯಾಟ್ರಿಕ್ ವೈಟ್‌ಸೆಲ್ ಎನ್ನುವ ಅಮೆರಿಕದ ಉದ್ಯಮಿಯನ್ನು ವಿವಾಹವಾಗಿದ್ದ ಲಾರೆನ್ 2019ರಲ್ಲಿ ಅವರಿಗೆ ವಿಚ್ಚೇಧನ ನೀಡಿದ್ದರು. ಈ ಜೋಡಿಗೆ ಮೂವರು ಮಕ್ಕಳಿದ್ದಾರೆ. ಜೆಫ್ ಬಿಜೋಸ್‌ಗೆ ಮೊದಲ ಹೆಂಡತಿಯಿಂದ ನಾಲ್ಕು ಮಕ್ಕಳಿದ್ದಾರೆ.
ವೆನಿಸ್‌ನಲ್ಲಿ ಈ ಅದ್ಧೂರಿ ವಿವಾಹಕ್ಕಾಗಿ ಕಳೆದ ಒಂದು ತಿಂಗಳಿನಿಂದ ತಯಾರಿ ನಡೆದಿತ್ತು. ಮದುವೆಯ ದಿನವೂ ನೂರಾರು ಕೋಟ್ಯಧಿಪತಿಗಳು ವೆನಿಸ್‌ನಲ್ಲಿ ಬೀಡು ಬಿಟ್ಟಿದ್ದರು.
ಇದರಿಂದ ಕೆರಳಿರುವ ವೆನಿಸ್‌ನ ಪರಿಸರವಾದಿಗಳು ಮದುವೆ ನಡೆದ ದಿನ ನಗರದ ಹಲವು ಕಡೆ ಬಿಜೋಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇವರಿಂದ ನಮ್ಮ ಪರಿಸರ ಹಾಳಾಗುತ್ತಿದೆ, ತೆರಿಗೆಗಳು ಹೆಚ್ಚಾಗುತ್ತಿವೆ, ಸ್ಥಳೀಯ ಪ್ರವಾಸಿಗರಿಗೆ ಸೌಕರ್ಯಗಳ ಬೆಲೆಗಳು ಗಗನಕ್ಕೇರಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.