
ಮಾರ್ಕೊ ರುಬಿಯೊ, ಎಸ್.ಜೈಶಂಕರ್
(ಚಿತ್ರ ಕೃಪೆ: X/@DrSJaishankar)
ಕೌಲಾಲಂಪುರ: ಮಲೇಷ್ಯಾದಲ್ಲಿ ನಡೆಯುತ್ತಿರುವ ಆಸಿಯಾನ್ ಶೃಂಗಸಭೆಯ ವೇಳೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿಯಾಗಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತುಕತೆ ನಡೆಸಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
'ಭಾರತ ಅಮೆರಿಕ ನಡುವಣ ದ್ವಿಪಕ್ಷೀಯ ಬಾಂಧವ್ಯ ಮತ್ತು ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಕುರಿತು ಚರ್ಚಿಸಲಾಯಿತು' ಎಂದು ಅವರು ತಿಳಿಸಿದ್ದಾರೆ.
ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾರ್ಕೊ ರುಬಿಯೊ, ಭಾರತದೊಂದಿಗೆ ಬಾಂಧವ್ಯಕ್ಕೆ ಯಾವುದೇ ಧಕ್ಕೆ ತರುವ ಉದ್ದೇಶ ಇಲ್ಲ ಎಂದಿದ್ದರು.
ಜೈಶಂಕರ್ ಅವರು, ಥಾಯ್ಲೆಂಡ್‌ನ ವಿದೇಶಾಂಗ ಸಚಿವ ಸಿಹಾಸಕ್ ಫುವಾಂಗ್‌ಕೆಕಿಯಾ ಮತ್ತು ಸಿಂಗಪುರದ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಅವರೊಂದಿಗೂ ಚರ್ಚೆ ನಡೆಸಿದ್ದರು.
ಈ ಮೊದಲು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಭೇಟಿಯಾಗಿದ್ದ ಜೈಶಂಕರ್ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಶೃಂಗಸಭೆಯ ಯಶಸ್ಸಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವನ್ನು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.