ಪ್ರಧಾನಿ ಶೆಹಬಾಜ್ ಷರೀಫ್
ಪಿಟಿಐ ಚಿತ್ರ
ಇಸ್ಲಾಮಾಬಾದ್: ಭಾರತವು ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಸೇರಿದಂತೆ ಇತರೆ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದನ್ನು ಪ್ರಧಾನಿ ಶೆಹಬಾಜ್ ಷರೀಫ್ ದೃಢಪಡಿಸಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಭಾರತ–ಪಾಕಿಸ್ತಾನ ನಡುವಿನ ಸಂಘರ್ಷ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೇ 10ರಂದು ಬೆಳಗಿನ ಜಾವ 2:30ರ ಸುಮಾರಿಗೆ ಜನರಲ್ ಸೈಯದ್ ಅಸಿಮ್ ಮುನೀರ್ ಅವರು ನನಗೆ ಕರೆ ಮಾಡಿದ್ದರು. ಭಾರತದ ಖಂಡಾಂತರ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಸೇರಿದಂತೆ ಇತರ ಪ್ರದೇಶಗಳನ್ನು ಹಾನಿಗೊಳಿಸಿರುವುದಾಗಿ ಮಾಹಿತಿ ನೀಡಿದ್ದರು’ ಎಂದು ತಿಳಿಸಿದ್ದಾರೆ.
ನಮ್ಮ ವಾಯುಪಡೆಯು ದೇಶವನ್ನು ಉಳಿಸುವ ಸಲುವಾಗಿ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು, ಚೀನಾದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಜೆಟ್‌ಗಳನ್ನು ಬಳಸಿ ಭಾರತದ ವಿರುದ್ಧ ಪ್ರತಿದಾಳಿ ನಡೆಸಿದೆ ಎಂದು ಷರೀಫ್ ಹೇಳುತ್ತಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತದ ರಕ್ಷಣಾ ಪಡೆಗಳು, ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿದ್ದವು.
ಭಾರತವು ಪಾಕಿಸ್ತಾನದ ಪ್ರಮುಖ ವಾಯುನೆಲೆಗಳು ಸೇರಿದಂತೆ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್. ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ನಡೆಸಿದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.
ಭಾರತ–ಪಾಕ್ ಎರಡೂ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳಾಗಿರುವುದರಿಂದ ಸಂಘರ್ಷವು ಯಾವ ಮಟ್ಟಕ್ಕಾದರೂ ಹೋಗಬಹುದು ಎನ್ನಲಾಗಿತ್ತು. ಆದರೆ, ನಾಲ್ಕು ದಿನಗಳ ನಂತರ ದಿಢೀರ್ ಕದನ ವಿರಾಮ ಏರ್ಪಟ್ಟಿತ್ತು. ಸಂಘರ್ಷದಿಂದಾಗಿ ಉಭಯ ದೇಶಗಳಲ್ಲಿ ಆಗಿರುವ ಹಾನಿಯ ಬಗ್ಗೆ ವಿಶ್ಲೇಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.