ADVERTISEMENT

Operation Haroof: ಪಾಕಿಸ್ತಾನದಲ್ಲಿ 51 ಕಡೆ 71 ಬಾರಿ ದಾಳಿ ಮಾಡಿದ ಬಲೂಚ್ ಸೇನೆ

ಏಜೆನ್ಸೀಸ್
Published 13 ಮೇ 2025, 13:18 IST
Last Updated 13 ಮೇ 2025, 13:18 IST
   

ಇಸ್ಲಾಮಾಬಾದ್: ‘ಕಳೆದ ಕೆಲ ವಾರಗಳಲ್ಲಿ ಪಾಕಿಸ್ತಾನದ ಬಲೊಚಿಸ್ತಾನ ಪ್ರಾಂತ್ಯದ 51 ಸ್ಥಳಗಳಲ್ಲಿ ‘ಆಪರೇಷನ್ ಹರೂಫ್‌’ ಹೆಸರಿನಲ್ಲಿ 71 ದಾಳಿಯನ್ನು ನಡೆಸಲಾಗಿದೆ’ ಎಂದು ಬಲೂಚ್ ವಿಮೋಚನಾ ಸೇನೆ (ಬಿಎಲ್‌ಎ) ಹೇಳಿದೆ. 

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಲೂಚ್, ‘ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯ ‘ಸಂತಾನೋತ್ಪತ್ತಿಯ ನೆಲ’ವಾಗಿದೆ. ಹೀಗಾಗಿ ಇಸ್ಲಾಮಾಬಾದ್‌ ಅನ್ನು ಜಾಗತಿಕ ಭಯೋತ್ಪಾದಕ ನೆಲೆ ಎಂದು ಘೋಷಿಸಬೇಕು’ ಎಂದು ಅಂತರರಾಷ್ಟ್ರೀಯ ಸಮುದಾಯವನ್ನು ಕೋರಿದೆ.

‘ಕೆಚ್‌, ಪಂಜ್ಗುರ್‌, ಮಸ್ಟಂಗ್‌, ಖ್ವೆಟ್ಟಾ, ಜಮೂರನ್, ತೊಲಂಗಿ, ಕುಲುಕಿ ಮತ್ತು ನುಷ್ಕಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಮತ್ತು ಗುಪ್ತಚರ ತಾಣಗಳ ಮೇಲೆ ಬಿಎಲ್ಎ ದಾಳಿ ನಡೆಸಿದೆ. ಸ್ಥಳೀಯ ಪೊಲೀಸ್ ಠಾಣೆ, ಖನಿಜ ಸಂಪತ್ತು ಸಾಗಣೆ ವಾಹನ ಹಾಗೂ ಹೆದ್ದಾರಿಯಲ್ಲಿನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗಿದೆ. ಇದರಲ್ಲಿ ಐಇಡಿ ಸ್ಫೋಟಕ ಹಾಗೂ ಸ್ನೈಪರ್‌ ಬಳಸಿ ಪಾಕಿಸ್ತಾನದ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಜತೆಗೆ ಅವರ ಭದ್ರತಾ ಕೇಂದ್ರಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದಿದೆ.

ADVERTISEMENT

‘ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿದೆ. ಭಾರತವನ್ನೂ ಒಳಗೊಂಡು ಅಂತರರಾಷ್ಟ್ರೀಯ ಸಮುದಾಯವು ಪಾಕಿಸ್ತಾನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹೀಗೆ ಮಾಡದಿದ್ದಲ್ಲಿ, ಈ ಪ್ರಾಂತ್ಯದಲ್ಲಿ ಇನ್ನಷ್ಟು ರಕ್ತಪಾತವಾಗುವ ಸಾಧ್ಯತೆಗಳಿವೆ’ ಎಂದು ಎಚ್ಚರಿಸಿದೆ.

‘ಪಾಕಿಸ್ತಾನವನ್ನು ಹೀಗೇ ಸಹಿಸಿಕೊಳ್ಳುತ್ತಿದ್ದರೆ, ಅದು ಇಡೀ ವಿಶ್ವವನ್ನೇ ನಾಶಗೊಳಿಸಲಿದೆ. ಲಷ್ಕರ್ ಎ ತಯಬಾ, ಜೈಷ್ ಎ ಮೊಹಮ್ಮದ್ ಒಳಗೊಂಡಂತೆ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಸಂಘಟನೆಗಳನ್ನು ಸಾಕುತ್ತಿರುವ ಪಾಕಿಸ್ತಾನವು ಇಡೀ ವಿಶ್ವದ ಅಪಾಯದ ಕೇಂದ್ರಬಿಂದುವಾಗಿದೆ’ ಎಂದು ಹೇಳಿದೆ. 

‘ಬಲೂಚಿಸ್ತಾನ ಸ್ವತಂತ್ರ ದೇಶಕ್ಕಾಗಿ ಸಶಸ್ತ್ರ ಹೋರಾಟ ಮುಂದುವರಿಯಲಿದೆ. ಇದರಲ್ಲಿ ಬಿಎಲ್‌ಎ ಮೂಖ ಪ್ರೇಕ್ಷಕವಲ್ಲ. ಬದಲಿಗೆ ಇದೊಂದು ಕ್ರಿಯಾತ್ಮಕ ಮತ್ತು ನಿರ್ಣಾಯಕ ಪಕ್ಷ’ ಎಂದು ಪಕ್ಷದ ವಕ್ತಾರ ಜೀಯಾಂದ್ ಬಲೂಚ್ ತಿಳಿಸಿದ್ದಾರೆ.‌

1948ರಲ್ಲಿ ಬಲೊಚಿಸ್ತಾನ ಜನರ ಇಚ್ಛೆಗೆ ವಿರುದ್ಧವಾಗಿ ಈ ಪ್ರಾಂತ್ಯವನ್ನು ಪಾಕಿಸ್ತಾನ ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಈ ಪ್ರದೇಶದ ಅಭಿವೃದ್ಧಿಯಲ್ಲಿ ಇಸ್ಲಾಮಾಬಾದ್ ನಿರ್ಲಕ್ಷ್ಯ ವಹಿಸಿದೆ. ಇಲ್ಲಿನ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಪಾಕಿಸ್ತಾನ ಅದರ ಲಾಭಾಂಶವನ್ನು ಬಲೊಚಿಸ್ತಾನಕ್ಕೆ ನೀಡುತ್ತಿಲ್ಲ. ಜತೆಗೆ ಸರ್ಕಾರಿ ಬೆಂಬಲಿತ ಭಯೋತ್ಪಾದಕರ ಮೂಲಕ ಈ ಪ್ರಾಂತ್ಯದಲ್ಲಿ ಹಿಂಸಾಚಾರವನ್ನು ಹುಟ್ಟುಹಾಕಿದೆ. ಹಲವರ ಅಪಹರಣ ಮತ್ತು ಕೊಲೆಗಳನ್ನು ಪಾಕಿಸ್ತಾನ ಮಾಡಿಸಿದೆ ಎಂದು ಬಿಎಲ್‌ಎ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.