ADVERTISEMENT

ಹಸೀನಾ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ ಬಾಂಗ್ಲಾ

ಪಿಟಿಐ
Published 18 ನವೆಂಬರ್ 2025, 6:39 IST
Last Updated 18 ನವೆಂಬರ್ 2025, 6:39 IST
ಶೇಖ್‌ ಹಸೀನಾ
ಶೇಖ್‌ ಹಸೀನಾ   

ಢಾಕಾ: ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದಾಗಿ ಮರಣ ದಂಡನೆಗೆ ಗುರಿಯಾಗಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೇಳಿಕೆಗಳನ್ನು ವರದಿ ಮಾಡದಂತೆ ಎಲ್ಲಾ ಮುದ್ರಣ, ವಿದ್ಯುನ್ಮಾನ ಮತ್ತು ಆನ್‌ಲೈನ್ ಮಾಧ್ಯಮಗಳಿಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಆದೇಶಿಸಿದೆ.

ಹಸೀನಾ ಅವರ ಹೇಳಿಕೆಗಳು ಸಮಾಜದಲ್ಲಿ ಹಿಂಸೆ ಮತ್ತು ಅಪರಾಧ ಚಟುವಟಿಕೆಗಳನ್ನು ಪ್ರಚೋದಿಸುತ್ತವೆ. ಸಾಮಾಜಿಕ ಸಾಮರಸ್ಯವನ್ನು ಕದಡುತ್ತದೆ. ಹೀಗಾಗಿ ಅವರ ಹೇಳಿಕೆಗಳನ್ನು ಪ್ರಕಟಿಸದಂತೆ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲವು ಮಾಧ್ಯಮ ಸಂಸ್ಥೆಗಳು ಶಿಕ್ಷೆಗೊಳಗಾದ ಮತ್ತು ಪರಾರಿಯಾದ ಹಸೀನಾ ಅವರ ಹೇಳಿಕೆಗಳನ್ನು ಪ್ರಸಾರ ಮಾಡುತ್ತಿರುವುದು ತೀವ್ರ ಕಳವಳಕಾರಿಯಾಗಿದೆ ಎಂದು ರಾಷ್ಟ್ರೀಯ ಅಪರಾಧ ಭದ್ರತಾ ಸಂಸ್ಥೆ (ಎನ್‌ಸಿಎಸ್‌ಎ) ಹೇಳಿದೆ.

ADVERTISEMENT

ಅಪರಾಧಿ ಮತ್ತು ಪರಾರಿಯಾಗಿರುವ ವ್ಯಕ್ತಿಗಳ ಹೇಳಿಕೆಗಳನ್ನು ಪ್ರಕಟಿಸುವುದು ಅಪರಾಧ ಭದ್ರತಾ ಸುಗ್ರೀವಾಜ್ಞೆಯ ನಿಬಂಧನೆಗಳ ಉಲ್ಲಂಘನೆಯಾಗುತ್ತದೆ. ರಾಷ್ಟ್ರೀಯ ಸಮಗ್ರತೆ, ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ, ಜನಾಂಗೀಯ ಅಥವಾ ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ಅಥವಾ ನೇರವಾಗಿ ಹಿಂಸಾಚಾರವನ್ನು ಪ್ರಚೋದಿಸುವ ವಿಷಯವನ್ನು ತೆಗೆದುಹಾಕಲು ಅಥವಾ ನಿರ್ಬಂಧಿಸಲು ಅಧಿಕಾರಿಗಳಿಗೆ ಅಧಿಕಾರವಿದೆ ಎಂದು ಎನ್‌ಸಿಎಸ್‌ಎ ಮಾಹಿತಿ ನೀಡಿದೆ.

ದ್ವೇಷ ಭಾಷಣ, ಜನಾಂಗೀಯ ಅಥವಾ ಹಿಂಸಾಚಾರ ಪ್ರಚೋದಿಸುವುದು, ಸಮಾಜದಲ್ಲಿ ಶಾಂತಿ ಕದಡಲು ಸುಳ್ಳು ಗುರುತನ್ನು ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಇದೆ ಎಂದು ಸಂಸ್ಥೆ ಹೇಳಿದೆ.

2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ಅಲ್ಲಿನ ಆಗಿನ ಪ್ರಧಾನಿ ಶೇಖ್‌ ಹಸೀನಾ ‘ಮಾನವೀಯತೆ ವಿರುದ್ಧ ಅಪರಾಧ ಎಸಗಿದ್ದಾರೆ’ ಎಂದು ತೀರ್ಮಾನಿಸಿರುವ ಬಾಂಗ್ಲಾದೇಶದಲ್ಲಿರುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು, 78 ವರ್ಷದ ಹಸೀನಾ ಅವರಿಗೆ ಸೋಮವಾರ ಮರಣ ದಂಡನೆ ವಿಧಿಸಿದೆ.