ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಢಾಕಾ: ಇಬ್ಬರು ಹಿಂದೂಗಳು ಸೇರಿ ಅಲ್ಪಸಂಖ್ಯಾತ ಸಮುದಾಯದ 4 ಮಂದಿ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆಯ್ಕೆಯಾದ ಹಿಂದೂಗಳಿಬ್ಬರೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಗೆ (ಬಿಎನ್‌ಪಿ) ಸೇರಿದವರು. ಬಿಎನ್‌ಪಿ ಮಂಗಳವಾರ (ಫೆ.17) ಸರ್ಕಾರ ರಚಿಸಲಿದೆ.
ಹಿಂದೂ ಸಮುದಾಯಕ್ಕೆ ಸೇರಿದ ಗೋಯೇಶ್ವರ ಚಂದ್ರ ರಾಯ್ ಹಾಗೂ ನಿತಿನ್ ರಾಯ್ ಚೌದರಿ ಬಿಎನ್‌ಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರು ಕ್ರಮವಾಗಿ ಢಾಕಾ ಹಾಗೂ ಪಶ್ಚಿಮ ಮಗುರ ಕ್ಷೇತ್ರದಿಂದ ಗೆದ್ದಿದ್ದಾರೆ. ಇಬ್ಬರೂ ಜಮಾತ್–ಎ–ಇಸ್ಲಾಮಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ.
ಗೋಯೇಶ್ವರ ಅವರು ಬಿಎನ್‌ಪಿಯ ನೀತಿ ನಿರೂಪಣಾ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ. ನಿತಿನ್ ರಾಯ್ ಅವರು ಪಕ್ಷದ ಉಪಾಧ್ಯಕ್ಷ, ಹಿರಿಯ ಸಲಹೆಗಾರರಾಗಿದ್ದಾರೆ.
ಬೌದ್ಧ ಧರ್ಮಕ್ಕೆ ಸೇರಿದ ಸಚಿಂಗ್ ಪ್ರು ಅವರು ಬಿಎನ್‌ಪಿಯಿಂದ ಆಯ್ಕೆಯಾಗಿದ್ದು, ಬಂದರ್ಭನ್ ಜಿಲ್ಲೆಯ ಮರ್ಮ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಆ ಕ್ಷೇತ್ರದಿಂದಲೇ ಅವರು ಚುನಾಯಿತರಾಗಿದ್ದಾರೆ. ನ್ಯಾಷನಲ್ ಸಿಟಿಜನ್ ಪಾರ್ಟಿ ಅಭ್ಯರ್ಥಿ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.
ಬೌದ್ಧ ಧರ್ಮವನ್ನು ಅನುಸರಿಸುವ ಚಕ್ಮಾ ಸಮುದಾಯಕ್ಕೆ ಸೇರಿದ ದೀಪೆನ್ ದಿವಾನ್ ಅವರು ಆಗ್ನೇಯ ರಂಗಮತಿ ಕ್ಷೇತ್ರದಿಂದ ಗೆದ್ದಿದ್ದಾರೆ. ಆದರೆ ಅವರು ತಾನು ಹಿಂದೂ ಎಂದು ಗುರುತಿಸಿಕೊಳ್ಳುತ್ತಾರೆ. ದೀವಾನ್ ಅವರು ಸ್ವತಂತ್ರ್ಯ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.
17 ಕೋಟಿ ಜಸಂಖ್ಯೆ ಇರುವ ಬಾಂಗ್ಲಾದೇಶದಲ್ಲಿ ಹಿಂದೂಗಳ ಪಾಲು ಶೇ 8.
ಚುನಾವಣಾ ಆಯೋಗದ ಪ್ರಕಾರ, 10 ಮಹಿಳೆಯರು ಸೇರಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 79 ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರಲ್ಲಿ ಹೆಚ್ಚಿನವರು ಹಿಂದೂಗಳು. 67 ಮಂದಿ ಪಕ್ಷದಿಂದ ಸ್ಪರ್ಧಿಸಿದ್ದರೆ, 12 ಮಂದಿ ಸ್ವತಂತ್ರ್ಯವಾಗಿ ಚುನಾವಣೆ ಎದುರಿಸಿದ್ದರು. ಬಾಂಗ್ಲಾದೇಶ ಕಮ್ಯೂನಿಸ್ಟ್ ಪಕ್ಷ (ಸಿಪಿಬಿ) ಅತಿ ಹೆಚ್ಚು ಅಂದರೆ 17 ಮಂದಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.