
ಲುಟ್‌ಫೋಝಮಾನ್ ಬಾಬರ್, ಅಬ್ದುಲ್ ಸಲಾಮ್ ಪಿಂಟು ಹಾಗೂ ಎಟಿಎಂ ಅಝರುಲ್ ಇಸ್ಲಾಂ
ಎಕ್ಸ್ ಚಿತ್ರ
ನವದೆಹಲಿ: ಶೇಖ್ ಹಸೀನಾ ಅವರ ಪದಚ್ಯುತಿ ನಂತರ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಸಾಧಿಸಿರುವ ತಾರೀಕ್ ರೆಹಮಾನ್ ಅವರ ಬಾಂಗ್ಲಾದೇಶ ನ್ಯಾಷಿನಲಿಸ್ಟ್ ಪಕ್ಷದ (ಬಿಎನ್‌ಪಿ) ಇಬ್ಬರನ್ನು ಒಳಗೊಂಡು ಒಟ್ಟು ಮೂವರ ಗೆಲುವು ಅಚ್ಚರಿ ಮೂಡಿಸಿದೆ.
ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಈ ಮೂವರೂ ಗಲ್ಲು ಶಿಕ್ಷೆಗೆ ಗುರಿಯಾದವರು. ಆದರೆ ಹಸೀನಾ ದೇಶದಿಂದ ಪಲಾಯನರಾದಾಗ ಮತ್ತು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ದೇಶಕ್ಕೆ ಮರಳುವವರೆಗೂ ಇವರು ಅಪರಾಧಿಗಳಾಗಿದ್ದರು. ಆದರೆ ನಂತರ ಇವರನ್ನು ಆರೋಪ ಮುಕ್ತರನ್ನಾಗಿ ಮಾಡಲಾಯಿತು.
ಬಿಎನ್‌ಪಿ ಪಕ್ಷಕ್ಕೆ ಸೇರಿದ ಲುಟ್‌ಫೋಝಮಾನ್ ಬಾಬರ್ ಮತ್ತು ಅಬ್ದುಲ್ ಸಲಾಮ್ ಪಿಂಟು ಹಾಗೂ ಜಮಾತ್ ಎ ಇಸ್ಲಾಮಿ ಎಟಿಎಂ ಅಝರುಲ್ ಇಸ್ಲಾಂ ಅವರು ಈಗ ಸಂಸತ್ ಪ್ರವೇಶಿಸುತ್ತಿದ್ದಾರೆ. ಭಾರತದ ದೃಷ್ಟಿಕೋನದಿಂದ ಇದೊಂದು ಅಹಿತಕರ ಘಟನೆಯಾಗಿದೆ.
2024ರ ಆಗಸ್ಟ್ 21ರಂದು ಶೇಖ್ ಹಸೀನಾ ಅವರನ್ನು ಗುರಿಯಾಗಿಸಿ ಗ್ರನೇಡ್ ದಾಳಿ ನಡೆದಿತ್ತು. ಅವರು ಬಚಾವಾದರೂ, ಸ್ಫೋಟದಿಂದಾಗಿ 24 ಜನ ಮೃತಪಟ್ಟರು. ಈ ಪ್ರಕರಣದ ಆರೋಪಿಗಳಾಗಿದ್ದ ತಾರೀಕ್ ರೆಹಮಾನ್, ಲುಟ್‌ಫೋಝಮಾನ್ ಬಾಬರ್ ಹಾಗೂ ಇತರರನ್ನು 2024ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ಹೈಕೋರ್ಟ್ ಖುಲಾಸೆಗೊಳಿಸಿತ್ತು.
ತಾರೀಕ್ ಪಕ್ಷದ ಅಬ್ದುಲ್ ಸಲಾಂ ಪಿಂಟು ಎಂಬಾತ ಭಾರತದಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಗೆ ಕಾರಣರಾದ ವ್ಯಕ್ತಿ. ಪ್ರಕರಣದಿಂದ ಬಾಬರ್ ಖುಲಾಸೆಗೊಂಡ ಕೆಲವೇ ದಿನಗಳಲ್ಲಿ ಪಿಂಟು ಕೂಡಾ ಆರೋಪ ಮುಕ್ತನಾದ. ಹೀಗಿದ್ದರೂ ಭಾರತದ ಮೇಲೆ ದಾಳಿ ನಡೆಸಿದ ಪಾಕಿಸ್ತಾನದ ಭಯೋತ್ಪಾದಕ ಗುಂಪು ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿಗೆ ನಿರಂತರವಾಗಿ ಈತ ಬೆಂಬಲ ನೀಡಿದ್ದಾನೆ ಎಂಬ ಆರೋಪವಿದೆ. 2006ರಲ್ಲಿ ಉತ್ತರ ಪ್ರದೇಶ ವಾರಾಣಸಿ ನ್ಯಾಯಾಲಯದ ಎದುರು ನಡೆದ ಸ್ಫೋಟ, 2007ರಲ್ಲಿ ಅಜ್ಮೇರ್ ಶರೀಫ್ ದರ್ಗಾ ಎದುರಿನ ಸ್ಫೋಟ ಹಾಗೂ 2011ರಲ್ಲಿ ದೆಹಲಿಯಲ್ಲಿ ನಡೆದ ಸ್ಫೋಟದಲ್ಲಿ ಈತನ ಕೈವಾಡವಿದೆ ಎಂಬ ಆರೋಪವಿದೆ. ಹೀಗಿದ್ದರೂ ಬಾಂಗ್ಲಾದೇಶದ ಚುನಾವಣೆಯಲ್ಲಿ ಪಿಂಟು ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾನೆ.
1971ರಲ್ಲಿ ನಡೆದ ವಿಮೋಚನಾ ಯುದ್ಧದಲ್ಲಿ ಸುಮಾರು 1,200 ಜನರ ಸಾವಿಗೆ ಕಾರಣನಾದ ಆರೋಪ ಎಟಿಎಂ ಅಝರುಲ್ ಇಸ್ಲಾಮ್ ಮೇಲಿದೆ. 1998ರಿಂದ ರಾಜಕೀಯ ವಲಯದಲ್ಲಿ ಈತ ಗುರುತಿಸಿಕೊಂಡಿದ್ದಾನೆ. 2012ರವರೆಗೂ ಬಿಎನ್‌ಪಿ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ ಅನುಭವ ಈತನದ್ದು. 2014ರಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಈತನನ್ನು ಮೊಹಮ್ಮದ್ ಯೂನಸ್ ಆರೋಪ ಮುಕ್ತರನ್ನಾಗಿಸಿದರು.
ಹೀಗೆ ಮರಣದಂಡನೆಗೆ ಗುರಿಯಾಗಿದ್ದ ಈ ಮೂವರೂ ಈಗ ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವ ಹೊಸ್ತಿಲಲ್ಲಿದ್ದಾರೆ.
ಹೀಗಿದ್ದರೂ, ಬಾಂಗ್ಲಾದೇಶದ ಹೊಸ ಸರ್ಕಾರದ ಕುರಿತು ನವದೆಹಲಿ ಆಶಾಭಾವ ಹೊಂದಿದೆ. ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿನ ಸಮಸ್ಯೆಗಳು ತಿಳಿಯಾಗಿ, ತಾರೀಕ್ ಸರ್ಕಾರದಲ್ಲಿ ಹೊಸ ಅವಕಾಶಗಳ ಕುರಿತು ಭಾರತೀಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಮತ್ತು ರಾಜಕೀಯ ನಿಲುವುಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವ ಮತ್ತು ಆಮೂಲಕ ಈ ಪ್ರದೇಶದಲ್ಲಿ ರಾಜಕೀಯ ಸ್ಥಿರತೆ ಮತ್ತು ಆರ್ಥಿಕ ಪ್ರಗತಿ ಸಾಧ್ಯ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.