
ಢಾಕಾ/ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆದ ಹಿಂದೂ ವ್ಯಕ್ತಿಯೊಬ್ಬನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಮಧ್ಯಂತರ ಸರ್ಕಾರ ಶನಿವಾರ ಹೇಳಿದೆ.
ಧರ್ಮನಿಂದನೆಯ ಆರೋಪದ ಮೇಲೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ದೀಪು ಚಂದ್ರದಾಸ್ ಎಂಬ ವ್ಯಕ್ತಿಯನ್ನು ಗುಂಪೊಂದು ಹತ್ಯೆ ಮಾಡಿತ್ತು. ಮೈಮೆನ್‌ಶಿಂಘೋ ನಗರದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿತ್ತು.
‘ಕ್ಷಿಪ್ರ ಕಾರ್ಯಪಡೆಯು ಶಂಕಿತ ಏಳು ಮಂದಿಯನ್ನು ಬಂಧಿಸಿದೆ’ ಎಂದು ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರಕಟಿಸಿದೆ. ‘ದೇಶದ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕಿತರನ್ನು ಬಂಧಿಸಲಾಗಿದೆ. ಅವರೆಲ್ಲರೂ 19ರಿಂದ 46 ವರ್ಷ ವಯಸ್ಸಿನವರು’ ಎಂದು ಹೇಳಿದ್ದಾರೆ.
ಧರ್ಮ ನಿಂದನೆ ಆರೋಪದ ಮೇಲೆ ಕಾರ್ಖಾನೆಯ ಆವರಣದಲ್ಲಿ ದೀಪು ಚಂದ್ರದಾಸ್ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಬಳಿಕ, ಆತನ ದೇಹವನ್ನು ಮರಕ್ಕೆ ನೇತುಹಾಕಿ, ಬೆಂಕಿ ಹಚ್ಚಿತ್ತು.
ಶವವನ್ನು ವಶಪಡಿಸಿಕೊಂಡು ಮರಣೊತ್ತರ ಪರೀಕ್ಷೆಗಾಗಿ ಮೈಮೆನ್‌ಶಿಂಘೋ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿದ ಮಧ್ಯಂತರ ಸರ್ಕಾರ, ಹೊಸ ಬಾಂಗ್ಲಾದೇಶದಲ್ಲಿ ಇಂತಹ ಹಿಂಸಾಚಾರಕ್ಕೆ ಅವಕಾಶವಿಲ್ಲ. ಇಂತಹ ಘೋರ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶುಕ್ರವಾರ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.