ADVERTISEMENT

ಭಾರತದ ‘ಸಪ್ತ ಸೋದರಿಯರ’ ವಿಷಯ ಪ್ರಸ್ತಾಪಿಸಿದ ಮೊಹಮ್ಮದ್ ಯೂನುಸ್: ಏನಿದು ವಿವಾದ?

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 10:38 IST
Last Updated 17 ಫೆಬ್ರುವರಿ 2026, 10:38 IST
ಮೊಹಮ್ಮದ್ ಯೂನುಸ್–ಪಿಟಿಐ ಚಿತ್ರ
ಮೊಹಮ್ಮದ್ ಯೂನುಸ್–ಪಿಟಿಐ ಚಿತ್ರ   

ಬಾಂಗ್ಲಾದೇಶದಲ್ಲಿ ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿ ಮುಕ್ತಾಯಗೊಂಡಿದ್ದು, ಮಹತ್ವದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿಯ ತಾರಿಕ್ ರೆಹಮಾನ್ ಅವರು ನೂತನ ಪ್ರಧಾನಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಈ ನಡುವೆ ಬಾಂಗ್ಲಾದ ಮಧ್ಯಂತರ ಸರ್ಕಾರದ ನಿರ್ಗಮಿತ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್ ಅವರು ತಮ್ಮ ದೇಶವನ್ನುದ್ದೇಶಿಸಿ ಮಾಡಿದ ವಿದಾಯ ಭಾಷಣದಲ್ಲಿ ಭಾರತದ ‘ಸಪ್ತ ಸಹೋದರಿಯರು’ ಎಂದು ಕರೆಯಲಾಗುವ ‘ಈಶಾನ್ಯ ರಾಜ್ಯಗಳ’ ಬಗ್ಗೆ ಪ್ರಸ್ತಾಪಿಸುವ ಮೂಲಕ ಮತ್ತೊಮ್ಮೆ ತಮ್ಮ ಭಾರತ ವಿರೋಧಿ ಮನೋಭಾವವನ್ನು ಪ್ರದರ್ಶಿಸಿದ್ದಾರೆ.

ಬಾಂಗ್ಲಾದೇಶದ ಕಡಲ ಪ್ರದೇಶವನ್ನು ನೇಪಾಳ, ಭೂತಾನ್ ಸೇರಿದಂತೆ ಏಳು ಈಶಾನ್ಯ ರಾಜ್ಯಗಳೊಂದಿಗೆ ಜೋಡಿಸಲು ಪ್ರಯತ್ನಿಸುವ ಉಪ-ಪ್ರಾದೇಶಿಕ ಆರ್ಥಿಕ ಚೌಕಟ್ಟನ್ನು ಯೂನಸ್ ವಿವರಿಸಿದ್ದಾರೆ. ಭಾರತ ಮತ್ತು ಬಾಂಗ್ಲಾದ ನಡುವಿನ ಸಂಬಂಧಗಳು ಹದಗೆಟ್ಟಿರುವ ಬೆನ್ನಲ್ಲೇ ಈ ವಿಷಯ ಮುನ್ನೆಲೆಗೆ ಬಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ADVERTISEMENT

‘ನನ್ನ 18 ತಿಂಗಳ ಆಡಳಿತಾವಧಿಯಲ್ಲಿ ಬಾಂಗ್ಲಾದ ಸಾರ್ವಭೌಮತ್ವ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಿದ್ದೇನೆ. ನಮ್ಮ ದೇಶ ಇನ್ನು ಮುಂದೆ ‘ವಿಧೇಯ’ ರಾಷ್ಟ್ರವಾಗಿರುವುದಿಲ್ಲ ಎಂದು ಅವರು ಹೇಳಿದರು.

‘ನನ್ನ ಆಡಳಿತದ ಅಂತ್ಯದ ವೇಳೆಗೆ ಇಂದಿನ ಬಾಂಗ್ಲಾದೇಶವು ತನ್ನ ಸ್ವತಂತ್ರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಆತ್ಮವಿಶ್ವಾಸ, ಸಕ್ರಿಯ ಮತ್ತು ಜವಾಬ್ದಾರಿಯುತವಾಗಿರಲಿದೆ. ಬಾಂಗ್ಲಾದೇಶವು ಇನ್ನು ಮುಂದೆ ವಿಧೇಯ ವಿದೇಶಾಂಗ ನೀತಿಯನ್ನು ಹೊಂದುವುದು ಅಥವಾ ಇತರ ದೇಶಗಳ ಸೂಚನೆ, ಸಲಹೆಗಳನ್ನು ಅವಲಂಬಿಸುವುದಿಲ್ಲ’ ಎಂದಿದ್ದಾರೆ.

‘ನಮ್ಮ ಕರಾವಳಿ ಪ್ರದೇಶವು ಭೌಗೋಳಿಕ ಗಡಿ ಮಾತ್ರವಲ್ಲ, ಇದು ಬಾಂಗ್ಲಾದೇಶಕ್ಕೆ ವಿಶ್ವ ಆರ್ಥಿಕತೆಯೊಂದಿಗೆ ತೊಡಗಿಸಿಕೊಳ್ಳಲು ತೆರೆದ ಬಾಗಿಲು. ನೇಪಾಳ, ಭೂತಾನ್ ಸೇರಿದಂತೆ ಏಳು ರಾಜ್ಯಗಳ ಜೊತೆಗೆ ಈ ಪ್ರದೇಶವು ಉತ್ತಮ ಆರ್ಥಿಕ ಸಾಮರ್ಥ್ಯವನ್ನು ಹೊಂದಿದೆ’ ಎಂದು ಯೂನಸ್ ಅವರು ಭಾರತದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಈಶಾನ್ಯ ರಾಜ್ಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

‘ಪಕ್ಷ, ಧರ್ಮ, ಜಾತಿ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲರೂ ನ್ಯಾಯಯುತ, ಮಾನವೀಯ ಮತ್ತು ಪ್ರಜಾಪ್ರಭುತ್ವದ ಬಾಂಗ್ಲಾದೇಶವನ್ನು ನಿರ್ಮಿಸುವ ಹೋರಾಟವನ್ನು ಮುಂದುವರಿಸಬೇಕೆಂದು ಎಲ್ಲರಲ್ಲೂ ಮನವಿ ಮಾಡುತ್ತೇನೆ. ಇದೇ ವೇಳೆ ಆಶಾವಾದದೊಂದಿಗೆ ವಿದಾಯ ಹೇಳುತ್ತೇನೆ’ ಎಂದು ಯೂನಸ್ ತಿಳಿಸಿದ್ದಾರೆ.

‘ನನ್ನ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳು ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದ್ದೇನೆ. ಹಲವು ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ 130 ಹೊಸ ಕಾನೂನುಗಳನ್ನು ರೂಪಿಸಲಾಯಿತು. 600 ಕಾರ್ಯಕಾರಿ ಆದೇಶಗಳನ್ನು ಹೊರಡಿಸಿದ್ದು, ಅವುಗಳಲ್ಲಿ ಶೇಕಡ 84ರಷ್ಟು ಜಾರಿಗೆ ತರಲಾಗಿದೆ’ ಎಂದು ಯೂನಸ್ ವಿವರಿಸಿದ್ದಾರೆ.

‘ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ನಮ್ಮ ಬಂದರುಗಳ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕಂಪನಿಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕುವಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ನಾವು ದಕ್ಷತೆಯನ್ನು ಹೆಚ್ಚಿಸಲು ಸಾಧ್ಯವಾಗದಿದ್ದರೆ, ಆರ್ಥಿಕವಾಗಿ ಹಿಂದುಳಿಯುತ್ತೇವೆ‘ ಎಂದು ಅವರು ಹೇಳಿದ್ದಾರೆ.

2025ರಲ್ಲೇ ‘ಏಳು ಸಹೋದರಿಯರ’ ಬಗ್ಗೆ ಪ್ರಸ್ತಾಪಿಸಿದ್ದ ಯೂನಸ್

2025ರಲ್ಲಿ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯೂನಸ್ ಅವರು ಮೊದಲು ಬಾರಿಗೆ ಏಳು ಈಶಾನ್ಯ ರಾಜ್ಯಗಳ ವಿಷಯವನ್ನು ಎತ್ತಿದ್ದರು. ಭಾರತದ ಏಳು ಸಹೋದರಿಯರು ಎಂದು ಕರೆಯಲಾಗುವ ಈಶಾನ್ಯ ರಾಜ್ಯಗಳಿಗೆ ಸಮುದ್ರದೊಂದಿಗೆ ನೇರ ಸಂಪರ್ಕ ಇಲ್ಲ. ನಾವೇ ಸಮುದ್ರದ (ಬಂಗಾಳ ಕೊಲ್ಲಿ) ಮೇಲೆ ನಿಯಂತ್ರಣ ಹೊಂದಿದ್ದೇವೆ. ಇದು ವಿಪುಲ ಅವಕಾಶಗಳನ್ನು ಸೃಷ್ಟಿಸಿದೆ. ಚೀನಾ ದೇಶವು ಈ ಸಮುದ್ರ ಭಾಗವನ್ನು ತನ್ನ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಬಳಸಿಕೊಳ್ಳಬಹುದು. ಚೀನಾ ಇಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಕೆ ಮಾಡಬಹುದು, ಮಾರಾಟ ಮಾಡಬಹುದು. ಇಡೀ ಜಗತ್ತಿಗೆ ಇಲ್ಲಿಂದ ವಸ್ತುಗಳನ್ನು ಪೂರೈಕೆ ಮಾಡಬಹುದು ಎಂದು ಹೇಳಿದ್ದರು. ಭಾರತದ ಆ ನಿರ್ದಿಷ್ಟ ಪ್ರಾಂತ್ಯದ ಭೌಗೋಳಿಕ ರಚನೆಯ ಅನಾನುಕೂಲವೇ ತಮಗೆ ಒದಗಿದ ಅವಕಾಶ ಎನ್ನುವಂತೆ ಅವರು ಮಾತನಾಡಿದ್ದಾರೆ. ಭಾರತ ಹಾಗೂ ಬಾಂಗ್ಲಾ ನಡುವಿನ ಸೌಹಾರ್ದ ಇತಿಹಾಸವನ್ನು ಯೂನುಸ್ ಮರೆತಂತೆ ವರ್ತಿಸಿದ್ದರು.

ಇದರ ಬೆನ್ನಲ್ಲೇ ಯೂನಸ್ ಹೇಳಿಕೆಗಳು ನಾಚಿಕೆಗೇಡು ಮತ್ತು ಪ್ರಚೋದನಕಾರಿ ಎಂದು ಭಾರತದ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಖಂಡಿಸಿದ್ದರು.

ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಬಾಂಗ್ಲಾ ಮತ್ತು ಭಾರತದ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿತ್ತು. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರು, ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಅಲ್ಪಸಂಖ್ಯಾತ ಸಮುದಾಯಗಳು ಸರಣಿ ದಾಳಿಗಳನ್ನು ಎದುರಿಸಿವೆ, ಅವುಗಳಲ್ಲಿ ಕೆಲವು ಮಾರಕವೂ ಆಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.