ADVERTISEMENT

ಬಾಂಗ್ಲಾ: ಜನಾಭಿಪ್ರಾಯಕ್ಕೆ ಸುಗ್ರೀವಾಜ್ಞೆ; ಆಕ್ಷೇಪ

ಪಿಟಿಐ
Published 14 ನವೆಂಬರ್ 2025, 15:30 IST
Last Updated 14 ನವೆಂಬರ್ 2025, 15:30 IST
ಮೊಹಮ್ಮದ್‌ ಯೂನುಸ್‌
ಮೊಹಮ್ಮದ್‌ ಯೂನುಸ್‌   

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಕೈಗೊಂಡಿರುವ ರಾಜಕೀಯ ನಿರ್ಣಯಕ್ಕೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹಿಸಲು ಬಾಂಗ್ಲಾದ ಅಧ್ಯಕ್ಷರು ಅನುಮತಿ ನೀಡಿದ್ದು, ಈ ಕುರಿತಂತೆ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಇದನ್ನು ಅಸಂವಿಧಾನಿಕ ನಡೆ ಎಂದು ಬಾಂಗ್ಲಾದ ಕಾನೂನು ತಜ್ಞರು ಆಕ್ಷೇಪಿಸಿದ್ದಾರೆ.

ಸಂವಿಧಾನಕ್ಕೆ ತಿದ್ದುಪಡಿ ತರುವ ವಿಚಾರವೂ ಸೇರಿದಂತೆ 90 ಪ್ರಸ್ತಾವಗಳನ್ನು ಒಳಗೊಂಡಿರುವ ರಾಜಕೀಯ ನಿರ್ಣಯವನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್ ನೇತೃತ್ವದ ಆಯೋಗವು ರಚಿಸಿದೆ. 

2026ರ ಫೆಬ್ರವರಿಯಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅದೇ ಸಮಯದಲ್ಲಿ ನಿರ್ಣಯ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಸರ್ಕಾರ ಉದ್ದೇಶಿಸಿದೆ. ಸರ್ಕಾರದ ಈ ಪ್ರಸ್ತಾವಕ್ಕೆ ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ದೀನ್‌ ಅವರು ಗುರುವಾರ ರಾತ್ರೋರಾತ್ರಿ ಅನುಮೋದನೆ ನೀಡಿ, ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

ADVERTISEMENT

ಆದರೆ, ‘ಸಂವಿಧಾನದ ಯಾವುದೇ ನಿಬಂಧನೆಯನ್ನು ರದ್ದುಗೊಳಿಸಲು ಅಥವಾ ತಿದ್ದುಪಡಿ ತರಲು ಜನಾಭಿಪ್ರಾಯ ಸಂಗ್ರಹಿಸುವ ವಿಧಾನಕ್ಕೆ ಸಂವಿಧಾನ ಆಸ್ಪದ ನೀಡುವುದಿಲ್ಲ. ಸಂವಿಧಾನದ 93ನೇ ವಿಧಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ. ಮಿಲಿಟರಿ ಆಡಳಿತವಿದ್ದು, ಸಂವಿಧಾನ ರದ್ದಾಗಿದ್ದರೆ ಮಾತ್ರ ಜನಾಭಿಪ್ರಾಯ ಸಂಗ್ರಹಣೆಗೆ ಅವಕಾಶವಿರುತ್ತದೆ’ ಎಂದು ಕಾನೂನು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ ಜತೆಗೆ ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.