
ಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ಸುಕ್ರಾ (ಬೊಲಿವಿಯಾ): ಬೊಲಿವಿಯಾ ವಾಯುಪಡೆಯ ಸರಕು ಸಾಗಣೆ ವಿಮಾನವು ಎಲ್ ಆಲ್ಟೋ ನಗರದಲ್ಲಿ ಪತನಗೊಂಡಿದ್ದು ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹೇಳಿಕೆಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಶುಕ್ರವಾರ ಸಂಜೆ 6.15ರ ಸುಮಾರಿಗೆ ದುರಂತ ಸಂಭವಿಸಿದೆ ಎಂದು ವಿಮಾನಯಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಂತಾ ಕ್ರೂಜ್ ವಿಮಾನ ನಿಲ್ದಾಣದಿಂದ ಎಲ್ ಆಲ್ಟೋಗೆ ಸಂಚರಿಸಿದ್ದ ಈ ವಿಮಾನವು, ರನ್ ವೇನಿಂದ ಜಾರಿ ಸಮೀಪದಲ್ಲಿದ್ದ ವಾಹನಗಳಿಗೆ ಡಿಕ್ಕಿಯಾಗಿದೆ.
ಅಪಘಾತಕ್ಕೀಡಾದ ವಿಮಾನವನ್ನು C-130 ಹರ್ಕ್ಯುಲಸ್ ಎಂದು ಖಚಿತಪಡಿಸಿರುವ ರಕ್ಷಣಾ ಸಚಿವಾಲಯ, ವಿಮಾನವು ಬೊಲಿವಿಯಾದ ಸೆಂಟ್ರಲ್ ಬ್ಯಾಂಕ್‌ಗೆ ನೋಟುಗಳನ್ನು ಸಾಗಿಸುತ್ತಿತ್ತು ಎಂದೂ ಮಾಹಿತಿ ನೀಡಿದೆ.
ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಸಾವು–ನೋವಿನ ಸಂಖ್ಯೆಯೂ ಖಚಿತವಾಗಿ ದೃಢಪಟ್ಟಿಲ್ಲ. ಆದರೆ, ಕನಿಷ್ಠ 11 ಮಂದಿ ಮೃತಪಟ್ಟಿರಬಹುದು. 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಪಘಾತದ ಸ್ಥಳದಲ್ಲಿ ನೋಟುಗಳನ್ನು ಆಯ್ದುಕೊಳ್ಳಲು ಮುಗಿಬಿದ್ದ ಜನರ ಗುಂಪನ್ನು ಪೊಲೀಸರು, ಅಶ್ರುವಾಯು ಪ್ರಯೋಗಿಸಿ ಚದುರಿಸಿದ್ದಾರೆ.
ಜನರನ್ನು ತಡೆಯಲು ಪೊಲೀಸರು ಸನ್ನದ್ಧವಾಗಿ ನಿಂತಿರುವುದು, ಅಶ್ರುವಾಯು ಪ್ರಹಾರದ ಬಳಿಕ ಜನರು ಓಡುತ್ತಿರುವುದು ಹಾಗೂ ಕೆಲವರು ಪೊಲೀಸರತ್ತ ಕಲ್ಲು ತೂರುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.