ADVERTISEMENT

ಮಾನವ ಹಕ್ಕು ಹೋರಾಟಗಾರ ಏಲ್ಸ್‌ ಮತ್ತು 2 ಸಂಘಟನೆಗಳಿಗೆ ನೊಬೆಲ್‌ ಶಾಂತಿ ಪುರಸ್ಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2022, 5:00 IST
Last Updated 8 ಅಕ್ಟೋಬರ್ 2022, 5:00 IST
ನೊಬೆಲ್‌ ಶಾಂತಿ ಪುರಸ್ಕಾರ
ನೊಬೆಲ್‌ ಶಾಂತಿ ಪುರಸ್ಕಾರ   

ಓಸ್ಲೋ: ಈ ವರ್ಷದ ನೊಬೆಲ್‌ ಶಾಂತಿ ಪುರಸ್ಕಾರವು ಬೆಲರೂಸ್‌ನ ಮಾನವ ಹಕ್ಕುಗಳ ಹೋರಾಟಗಾರ ಏಲ್ಸ್‌ ಬಿಯಾಲಿಯಾಸ್ಕಿ, ರಷ್ಯಾದ ‘ಮೆಮೋರಿಯಲ್‌’ ಮತ್ತು ಉಕ್ರೇನ್‌ನ ‘ಸೆಂಟರ್‌ ಫಾರ್‌ ಸಿವಿಲ್‌ ಲಿಬರ್ಟಿಸ್‌’ ಸಂಘಟನೆಗಳಿಗೆ ಒಲಿದಿದೆ.

ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಿರುವ ಏಲ್ಸ್‌ ಬಿಯಾಲಿಯಾಸ್ಕಿ ಅವರು ಜೈಲು ಶಿಕ್ಷೆಗೂ ಒಳಗಾಗಿದ್ದರು.

ಸಂಘರ್ಷ ನಿಲ್ಲಿಸಲು ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಿದ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಈ ಹಿಂದೆಯೂ ಈ ಪುರಸ್ಕಾರವನ್ನು ನೀಡಲಾಗಿತ್ತು. ಉಭಯ ದೇಶಗಳ ನಡುವೆ ಯುದ್ಧ ನಡೆಯುತ್ತಿರುವ ಈ ಸಂದರ್ಭದಲ್ಲಿ, ರಷ್ಯಾ ಮತ್ತು ಉಕ್ರೇನ್‌ನ ಸಂಘಟನೆಗಳು ಹಾಗೂ ಬೆಲರೂಸ್‌ನ ಏಲ್ಸ್‌ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಕ್ಕೆ ಮಹತ್ವ ಬಂದಿದೆ.

ADVERTISEMENT

ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್‌ ಪುರಸ್ಕಾರಕ್ಕೆ ಆಯ್ಕೆಯಾದವರ ಹೆಸರನ್ನು ಅಕ್ಟೋಬರ್‌ 10ರಂದು ಘೋಷಿಸ
ಲಾಗುವುದು ಎಂದು ನೊಬೆಲ್ ಸಮಿತಿಯ ಅಧ್ಯಕ್ಷ ಬೆರಿಟ್ ರೀಸ್-ಆಂಡರ್ಸನ್ ಅವರು ಶುಕ್ರವಾರ ತಿಳಿಸಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭಿಸಿದ ನಂತರದ ದಿನಗಳಲ್ಲಿ ಕಂಡು ಬಂದ ಮಾನವ ಹಕ್ಕುಗಳ ಉಲ್ಲಂಘನೆ, ಅಧಿಕಾರ ದುರುಪಯೋಗವನ್ನು ದಾಖಲಿಸುವ ನಿಟ್ಟಿನಲ್ಲಿ ಏಲ್ಸ್‌, ‘ಮೆಮೋರಿಯಲ್‌’ ಹಾಗೂ ‘ಸೆಂಟರ್‌ ಫಾರ್‌ ಸಿವಿಲ್‌ ಲಿಬರ್ಟಿಸ್‌’ನ ಕಾರ್ಯ ಗಮನಾರ್ಹವಾದುದು ಎಂದು ಬೆರಿಟ್‌ ಹೇಳಿದ್ದಾರೆ.

ನೆಚ್ಚಿನ ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಭಾರತೀಯರು: ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕರಾದ ಪ್ರತೀಕ್‌ ಸಿನ್ಹಾ ಮತ್ತು ಮೊಹಮ್ಮದ್‌ ಜುಬೈರ್‌ ಹಾಗೂ ಭಾರತದ ಲೇಖಕ ಹರ್ಷ ಮಂದರ್‌ ಅವರು ಈ ವರ್ಷದ ನೊಬೆಲ್‌ ಶಾಂತಿ ಪುರಸ್ಕಾರ ಪಡೆಯುವ ನೆಚ್ಚಿನ ಸ್ಪರ್ಧಿಗಳೆನಿಸಿದ್ದರು. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಇವರ ಹೆಸರುಗಳಿದ್ದವು.

ದಿ ಪೀಸ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ ಓಸ್ಲೊ (ಪಿಆರ್‌ಐಒ) ನಿರ್ದೇಶಕ ಹೆನ್ರಿಕ್‌ ಉರ್ದಾಲ್‌ ಬಿಡುಗಡೆ ಮಾಡಿರುವ ಸಂಭಾವ್ಯರ ಪಟ್ಟಿಯಲ್ಲಿ ಜುಬೈರ್‌, ಪ್ರತೀಕ್‌ ಹಾಗೂ ಮಂದರ್‌ ಅವರ ಹೆಸರುಗಳಿದ್ದವು. ಜೊತೆಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ, ವಿಶ್ವ
ಸಂಸ್ಥೆಯ ನಿರಾಶ್ರಿತರ ಏಜೆನ್ಸಿ, ಬೆಲರೂಸ್‌ನ ಹೋರಾಟಗಾರ್ತಿ ಸ್ವಿಯಾಟ್ಲಾನಾ ಸಿಖಾನೌಸ್ಕಾಯ, ಡಬ್ಲ್ಯುಎಚ್‌ಒ, ರಷ್ಯಾದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಲ್ನಿ, ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೆತಾ ಥನ್‌ಬರ್ಗ್‌ ಅವರ ಹೆಸರುಗಳೂ ಮುಂಚೂಣಿಯಲ್ಲಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.