ಮಾರ್ಕ್ ಕಾರ್ನೇ
ರಾಯಿಟರ್ಸ್ ಚಿತ್ರ
ಒಟ್ಟಾವ: ಕೆನಡಾದ ಚುನಾವಣೆಯಲ್ಲಿ ಲಿಬರಲ್ ಪಕ್ಷ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಧಾನಿ ಮಾರ್ಕ್ ಕಾರ್ನೇ ಅವರಿಗೆ ಜಗತ್ತಿನ ಹಲವು ರಾಷ್ಟ್ರಗಳ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
ಅಮೆರಿಕ ಹೇರಿದ ಪ್ರತಿಸುಂಕದ ನಂತರ ಉಂಟಾದ ವ್ಯಾಪಾರ ಯುದ್ಧದ ನಂತರ ಲಿಬರಲ್ ಪಕ್ಷವು ಗೆಲುವು ಸಾಧಿಸಿರುವುದು ಸಾಕಷ್ಟು ಸದ್ದು ಮಾಡಿದೆ. ಜತೆಗೆ, ಗೆಲುವಿನ ಬೆನ್ನಲ್ಲೇ ಸುಂಕ ಹೇರಿಕೆ ವಿರುದ್ಧ ಭಯಮುಕ್ತ ಹೋರಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಕೆನಡಾ ಜಗತ್ತಿನೊಂದಿಗೆ ನಿಲ್ಲಲಿದೆ ಎಂಬ ಕಾರ್ನೇ ಹೇಳಿಕೆ ಸಂಚಲನ ಉಂಟು ಮಾಡಿದೆ.
‘ಜಿ7 ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಜತೆಗೂಡಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ನಮ್ಮ ಪ್ರಜಾತಾಂತ್ರಿಕ ಮೌಲ್ಯಗಳನ್ನು ಹಂಚಿಕೊಂಡು ಕೆಲಸ ಮಾಡಲು ಸಿದ್ಧ. ಮುಕ್ತ ವ್ಯಾಪಾರಕ್ಕೆ ಬದ್ಧ. ಯುರೋಪ್‌ನೊಂದಿಗೆ ಕೆನಡಾ ಉತ್ತಮ ಬಾಂಧವ್ಯ ಹೊಂದಿದೆ. ಅದು ಇನ್ನಷ್ಟು ವೃದ್ಧಿಸುತ್ತಿದೆ’ ಎಂದಿದ್ದಾರೆ.
ಕಾರ್ನೇಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಜನರ ಹಿತಕ್ಕಾಗಿ ನಮ್ಮ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವ ನಿಟ್ಟಿನಲ್ಲಿ ಸಂಬಂಧವನ್ನು ಗಟ್ಟಿಗೊಳಿಸೋಣ. ಆ ನಿಟ್ಟಿನಲ್ಲಿ ಕೆನಡಾದೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ’ ಎಂದಿದ್ದಾರೆ.
ಚೀನಾ ಕೂಡಾ ಕಾರ್ನೇಗೆ ಅಭಿನಂದನೆ ಸಲ್ಲಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್ ಸೇರಿದಂತೆ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಕೆನಡಾದ ಗವರ್ನರ್ ಆಗಿದ್ದ ಕಾರ್ನೇ ಈಗ ಪ್ರಧಾನಿ ಹುದ್ದೆಗೇರಿದ್ದಾರೆ.
ಕಾರ್ನೇ ಪ್ರತಿಸ್ಪರ್ಧಿ ಪಾಪ್ಯುಲಿಸ್ಟ್ ಕನ್ಸರ್ವೇಟಿವ್ ಪಕ್ಷದ ನಾಯಕ ಪಿಯೆರಿ ಪೊಯ್‌ಲಿವರ್ ಅವರು ಒಟ್ಟಾವಾ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ.
ಸಂಸತ್ತಿನ 343 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಾಗಿ ಲಿಬರಲ್ ಪಕ್ಷವು ವಿಶ್ವಾಸ ವ್ಯಕ್ತಪಡಿಸಿತ್ತು. ಬಹುಮತಕ್ಕೆ ಬೇಕಾಗಿರುವ 172 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆಯೇ ಅಥವಾ ಸರ್ಕಾರ ಸ್ಥಾಪನೆಗೆ ಸಣ್ಣ ಪಕ್ಷಗಳ ನೆರವು ಪಡೆಯಲಿದೆಯೇ ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ.
ವಿಜಯೋತ್ಸವದಲ್ಲಿ ಮಾತನಾಡಿದ ಕಾರ್ನೇ ಅವರು, ಅಮೆರಿಕದ ಬೆದರಿಕೆಗಳನ್ನು ಎದುರಿಸಲು ಒಗ್ಗಟ್ಟಿನಿಂದ ಇರಬೇಕಾದ ಮಹತ್ವವನ್ನು ಒತ್ತಿ ಹೇಳಿದರು.
‘ಎರಡನೇ ವಿಶ್ವ ಯುದ್ಧದಿಂದ ಅಮೆರಿಕ ಮತ್ತು ಕೆನಡಾ ಪಾಲಿಸುತ್ತಿದ್ದ ಪರಸ್ಪರ ಅನುಕೂಲ ವ್ಯವಸ್ಥೆಯು ಅಂತ್ಯಗೊಂಡಿದೆ. ಅಮೆರಿಕದ ವಂಚನೆಯಿಂದ ಆಘಾತಕ್ಕೊಳಗಾಗಿದ್ದೇವೆ, ಆದರೆ ಅದರಿಂದ ನಾವು ಪಾಠ ಕಲಿಯಬೇಕಿದೆ’ ಎಂದರು.
ಅಮೆರಿಕಕ್ಕೆ ನಮ್ಮ ಭೂಮಿ ಸಂಪನ್ಮೂಲ ನೀರು ಬೇಕಿದೆ. ಟ್ರಂಪ್ ನಮ್ಮ ಒಗ್ಗಟ್ಟನ್ನು ಮುರಿಯಲು ಯತ್ನಿಸುತ್ತಿದ್ದಾರೆ. ಆದರೆ ಅದು ಎಂದೆಂದಿಗೂ ಸಾಧ್ಯವಿಲ್ಲಮಾರ್ಕ್ ಕಾರ್ನೇ, ಕೆನಡಾ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.