ಜಸ್ಟಿನ್ ಟ್ರೂಡ್, ಕ್ರಿಸ್ಟಿಯಾ ಫ್ರೀಲ್ಯಾಂಡ್, ಮಾರ್ಕ್ ಕಾರ್ನೆ, ಅನಿತಾ ಆನಂದ್, ಡಾಮಿನಿಕ್ ಲೆಬ್ಲ್ಯಾಂಕ್, ಮೆಲಾನಿ ಜೊಲಿ
ಎಕ್ಸ್ ಚಿತ್ರ
ಬೆಂಗಳೂರು: ಕೆನಡಾದ ಪ್ರಧಾನಿಯಾಗಿ ಒಂಭತ್ತು ವರ್ಷಗಳನ್ನು ಕಳೆದಿದ್ದ ಜಸ್ಟಿನ್ ಟ್ರೂಡ್, ಅನಿರೀಕ್ಷಿತ ವಿರೋಧ ಎದುರಾಗಿದ್ದರಿಂದ ಸರ್ಕಾರ ಹಾಗೂ ತಾವು ಪ್ರತಿನಿಧಿಸುವ ಲಿಬರಲ್ ಪಕ್ಷದ ಮುಖ್ಯಸ್ಥ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ವರ್ಷ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಪಕ್ಷದ ನಾಯಕತ್ವಕ್ಕಾಗಿ ಪೈಪೋಟಿ ತೀವ್ರಗೊಂಡಿದೆ.
ಕೆನಡಾದ ಮಾಜಿ ಉಪ ಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ಹೆಸರು ಲಿಬರಲ್ ಪಕ್ಷದ ಮುಖ್ಯಸ್ಥರ ಸ್ಥಾನಕ್ಕೆ ಪ್ರಭಲವಾಗಿ ಕೇಳಿಬರುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಫ್ರೀಲ್ಯಾಂಡ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅಲ್ಲಿನ ಜನರಲ್ಲಿ ಅಚ್ಚರಿ ಮೂಡಿಸಿತ್ತು. ಇದಕ್ಕೆ ಜಸ್ಟಿನ್ ಅವರೊಂದಿಗಿನ ಮನಸ್ಥಾಪವೇ ಕಾರಣ ಎಂದೆನ್ನಲಾಗಿದೆ. ಇದಕ್ಕೂ ಮೊದಲು ಫ್ರೀಲ್ಯಾಂಡ್ ಅವರು ವಿದೇಶಾಂಗ ಮತ್ತು ಹಣಕಾಸು ಇಲಾಖೆಯನ್ನು ನಿರ್ವಹಿಸಿದ್ದರು.
ಹಿಂದೆ ದೇಶ ತೊರೆಯಲು ಅವಕಾಶ ನಿರಾಕರಣೆ ಹಾಗೂ ಬ್ಯಾಂಕ್ ಖಾತೆ ಜಪ್ತಿಯಂಥ ಕಠಿಣ ಕ್ರಮಗಳಿಗೆ ಒಳಗಾಗಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ನಿಜ್ಜರ್‌ಗೆ ಸಂಸತ್ತಿನಲ್ಲಿ ಮರಣೋತ್ತರ ಗೌರವ ಸೂಚಿಸಿದ್ದರ ಕುರಿತು ಜಸ್ಟಿನ್ ಅವರ ನಿಲುವನ್ನು ಫ್ರೀಲ್ಯಾಂಡ್ ಪುನರುಚ್ಚರಿಸಿದ್ದರು.
ಬ್ಯಾಂಕ್ ಆಫ್ ಕೆನಡಾದ ಮಾಜಿ ಗವರ್ನರ್ ಮಾರ್ಕ್ ಕಾರ್ನೆ ಅವರು ಲಿಬರಲ್ ಪಕ್ಷದ ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಹಣಕಾಸು ಸಚಿವ ಸ್ಥಾನಕ್ಕೆ ಕಾರ್ನೆ ಅವರನ್ನು ಜಸ್ಟಿನ್ ಆಹ್ವಾನಿಸಿದ್ದರು. ಆದರೆ ಅವರು ಅದನ್ನು ನಿರಾಕರಿಸಿದ್ದರು.
ಬ್ರೂಕ್‌ಫೀಲ್ಡ್ ಅಸೆಟ್ ಮ್ಯಾನೇಜ್ಮೆಂಟ್‌ನ ಮುಖ್ಯಸ್ಥರಾಗಿದ್ದ ಕಾರ್ನೆ ಅವರು, ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವ ಕುರಿತು 2023ರಲ್ಲಿ ಹೇಳಿಕೆ ನೀಡಿದ್ದರು. ಭಾರತದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿರುವ ಬೇಡಿಕೆ ಹಾಗೂ ಜಾಗತಿಕ ಪೂರಕ ಸರಪಳಿಯಲ್ಲಿನ ಬದಲಾವಣೆಯಿಂದಾಗಿ ಭಾರತದಲ್ಲಿ ಹೂಡಿಕೆ ಅಗತ್ಯ ಎಂದಿದ್ದರು.
ಕೆನಡಾದ ಸಾರಿಗೆ ಸಚಿವರಾಗಿರುವ ಅನಿತಾ ಆನಂದ್ ಅವರು ಲಿಬರಲ್ ಪಕ್ಷದ ಅತ್ಯಂತ ಮುಂಚೂಣಿಯ ನಾಯಕಿ ಎಂದೇ ಪರಿಗಣಿಸಲಾಗಿದೆ. ಹಣಕಾಸು ಮಾರುಕಟ್ಟೆ ನಿಯಂತ್ರಣ ಹಾಗೂ ಕಾರ್ಪೊರೇಟ್ ಗವರ್ನೆನ್ಸ್‌ನಲ್ಲಿ ಪರಿಣತಿ ಹೊಂದಿರುವ ಅನಿತಾ ಅವರು, ಹಲವು ಪ್ರಮುಖ ಹುದ್ದೆಗಳನ್ನು ಈವರೆಗೂ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸಾಗರೋತ್ತರ ಸಾರ್ವಜನಿಕ ಸೇವೆ ಹಾಗೂ ನೇಮಕಾತಿ, ಸೇನೆ ಮತ್ತು ಖಜಾನೆ ಮಂಡಳಿಯನ್ನು ನಿರ್ವಹಿಸಿದ್ದಾರೆ.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ವಿರುದ್ಧ ಜಸ್ಟಿನ್ ಆರೋಪಿಸಿದ ಬೆನ್ನಲ್ಲೇ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಿತ್ತು. ಈ ಸಂದರ್ಭದಲ್ಲಿ ಭಾರತಕ್ಕೆ ಪ್ರಯಾಣಿಸುವವರ ಭದ್ರತೆಗೆ ಭಾರತೀಯ ಮೂಲದವರಾದ ಅನಿತಾ ಆನಂದ್ ಹೆಚ್ಚು ಒತ್ತು ನೀಡಿದ್ದರು. ಕೆನಡಾದಿಂದ ಭಾರತಕ್ಕೆ ಪ್ರಯಾಣಿಸುವವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗಿತ್ತು.
ಜಸ್ಟಿನ್ ಟ್ರೂಡ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಡಾಮಿನಿಕ್ ಲೆಬ್ಲ್ಯಾಂಕ್ ಅವರು ಹಣಕಾಸು ಸಚಿವರಾಗಿದ್ದಾರೆ. ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇವರು ನಿಯೋಜನೆಗೊಂಡರು. ಲೆಬ್ಲ್ಯಾಂಕ್ ಅವರದ್ದು ರಾಜಕೀಯ ಕುಟುಂಬ. ಅವರ ತಂದೆ ಟ್ರೂಡ್ ಅವರ ತಂದೆ ಪೀರ್ರೆ ಟ್ರೂಡ್ ಅವರ ಸರ್ಕಾರದಲ್ಲಿ ಸಂಪುಟ ಸಚಿವರಾಗಿದ್ದರು. ವಕೀಲರಾಗಿರುವ ಅವರು 2008ರಲ್ಲಿ ಪಕ್ಷದ ನಾಯಕತ್ವ ವಹಿಸಿದ್ದರು. ಆದರೆ ಪರಾಭವಗೊಂಡರು.
ಕೆನಡಾದ ಆಂತರಿಕ ವಿಷಯಗಳಲ್ಲಿ ಭಾರತೀಯ ಮೂಲದವರು ಮೂಗು ತೂರಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಲೆಬ್ಲ್ಯಾಂಕ್ ಮಾಡಿದ್ದರು. ಇಂಥ ವಿಷಯಗಳ ಕುರಿತು ನಡೆಸಿದ ತನಿಖೆಯಲ್ಲಿ ಕೊಲೆ, ಬೆದರಿಕೆ ಹಾಗೂ ಸುಲಿಗೆಯಂತ ಗಂಭೀರ ಅಪರಾಧ ಕೃತ್ಯಗಳು ಕಂಡುಬಂದಿದ್ದು, ಇದರಲ್ಲಿ ಭಾರತ ಸರ್ಕಾರದ ಬೆಂಬಲವಿದೆ ಎಂದು ಆರೋಪಿಸಿದ್ದರು.
ವಿದೇಶಾಂಗ ಸಚಿವೆ ಮೆಲಾನಿ ಜೊಲಿ ಅವರು ಕೆನಡಾ ಎದುರಿಸುತ್ತಿದ್ದ ಕೆಲ ರಾಜತಾಂತ್ರಿಕ ಒತ್ತಡಗಳನ್ನು ನಿರ್ವಹಿಸುವ ಯತ್ನ ನಡೆಸಿದ್ದರು. ಇದರಲ್ಲಿ ಚೀನಾ ಹಾಗೂ ಭಾರತದೊಂದಿಗಿನ ಸಂಬಂಧಗಳೂ ಸೇರಿದ್ದವು. ‘ಪ್ರಾಯೋಗಿಕ ರಾಜತಾಂತ್ರಿಕತೆ’ಗಾಗಿ ಜೊಲಿ ಹೆಚ್ಚು ಪ್ರಸಿದ್ಧಿ. ಈ ನೀತಿಯಡಿ ಕೆನಡಾ ಸಮಸ್ಯೆ ಹೊಂದಿರುವ ರಾಷ್ಟ್ರಗಳೊಂದಿಗೆ ಬಾಂಧವ್ಯ ವೃದ್ಧಿಯ ಗುರಿಯನ್ನು ಹೊಂದಲಾಗಿತ್ತು.
ಕೆನಡಾ ನಾಗರಿಕರನ್ನು ಗುರಿಯಾಗಿಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ಆರು ಭಾರತೀಯ ಅಧಿಕಾರಿಗಳನ್ನು ಕಳೆದ ವರ್ಷ ಜೊಲಿ ವಜಾಗೊಳಿಸಿದ್ದರು. 2023ರಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ತನಿಖೆಯ ಮುಂದುವರಿದ ಭಾಗವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.